Advertisement

ಕ್ಷೀಣಿಸಿದೆ ಪೂರ್ವ ಮುಂಗಾರು; ಮಳೆ ಬಂದರೂ, ಸೆಕೆ ಕಡಿಮೆಯಾಗಿಲ್ಲ !

11:14 AM May 27, 2019 | keerthan |

ಮಹಾನಗರ: ಪೂರ್ವ ಮುಂಗಾರು ಮಳೆ ಕೊರತೆಯಲ್ಲಿದ್ದ ಕರಾವಳಿಯಲ್ಲಿ ಕಳೆದ ಒಂದು ವಾರಗಳಿಂದ ಸಂಜೆ ಮತ್ತು ರಾತ್ರಿ ವೇಳೆ ಉತ್ತಮ ಮಳೆಯಾಗುತ್ತಿದೆ. ಅದರಲ್ಲಿಯೂ ಮಂಗಳೂರು ನಗರದಲ್ಲಿ ಈವರೆಗೆ ದೊಡ್ಡ ಪ್ರಮಾಣದ ಮಳೆ ಬರದಿದ್ದರೂ, ಒಂದು ವಾರಗಳಿಂದ ರಾತ್ರಿ ವೇಳೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುತ್ತಿದ್ದು, ಸೆಕೆಯಿಂದ ಬೇಯುತ್ತಿದ್ದ ಮಂದಿಗೆ ತುಸು ತಂಪೆರೆದಿದೆ.

Advertisement

ಈಗ ಸುರಿಯುತ್ತಿರುವುದು ಮುಂಗಾರು ಪೂರ್ವ ಮಳೆಯಾಗಿದ್ದು, ವಾಡಿಕೆಯಂತೆ ಎಪ್ರಿಲ್‌ ತಿಂಗಳಿನಿಂದ ಮೇ ತಿಂಗಳ ಕೊನೆಯವರೆಗೆ ಪೂರ್ವ ಮುಂಗಾರು ಮಳೆ ಸುರಿಯುತ್ತದೆ. ಆದರೆ, ಈ ಬಾರಿ ಪೂರ್ವ ಮುಂಗಾರು ಕ್ಷೀಣಿಸಿದೆ. ನಗರದಲ್ಲಿ ವಾಡಿಕೆಯಂತೆ ಎಪ್ರಿಲ್‌ ತಿಂಗಳಿನಲ್ಲಿ ಸುರಿಯಾಬೇಕಾದ ಮಳೆಯಾಗಲಿಲ್ಲ. ಇನ್ನು, ಮೇ ತಿಂಗಳಿನಲ್ಲಿಯೂ ವಾಡಿಕೆ ಮಳೆಯಾಗಲಿಲ್ಲ. ಪೂರ್ವ ಮುಂಗಾರು ಮಳೆ ಆರಂಭವಾದದ್ದೇ ಮೇ ಕೊನೆಯವಾರದಲ್ಲಿ ಇದರಿಂದಾಗಿ ದ.ಕ. ಜಿಲ್ಲೆಯಲ್ಲಿ ಒಟ್ಟಾರೆ ಶೇ.63ರಷ್ಟು ಮಳೆ ಕೊರತೆ ಅನುಭವಿಸುತ್ತಿದೆ.

ದಕ್ಷಿಣ ಒಳನಾಡಿನಲ್ಲೆ ಮೇಲ್ಮೆ ಸುಳಿಗಾಳಿ ಇದ್ದು, ಪರಿಣಾಮವಾಗಿ ವಾತಾವರಣದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ರಾತ್ರಿ ವೇಳೆ ಮಳೆ ಬಂದರೂ, ವಾತಾವರಣದಲ್ಲಿ ಉಷ್ಣಾಂಶದಲ್ಲಿ ಯಾವುದೇ ರೀತಿಯ ಕಡಿಮೆಯಾಗಲಿಲ್ಲ. ಸದ್ಯ ವಾಡಿಕೆಗಿಂದ 3- 4 ಡಿ.ಸೆ. ಉಷ್ಣಾಂಶ ಹೆಚ್ಚಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ತಪುಲುತ್ತಿದೆ.

ಮಳೆ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಶೇ. 63ರಷ್ಟು ಪೂರ್ವ ಮುಂಗಾರು ಮಳೆ ಕೊರತೆ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ ಶೇ. 55, ಬಂಟ್ವಾಳ ತಾಲೂಕಿನಲ್ಲಿ ಶೇ. 74, ಮಂಗಳೂರು ತಾಲೂಕಿನಲ್ಲಿ ಶೇ.85, ಪುತ್ತೂರು ತಾಲೂಕಿನಲ್ಲಿ ಶೇ. 65, ಸುಳ್ಯ ತಾಲೂಕಿನಲ್ಲಿ ಶೇ. 44 ಮಳೆ ಕೊರತೆ ಇದೆ. ಜಿಲ್ಲೆಯನ್ನು ಹೋಲಿಕೆ ಮಾಡಿದರೆ, ಮಂಗಳೂರು ನಗರದಲ್ಲಿ ಅತೀ ಕಡಿಮೆ ಮಳೆಯಾಗಿದೆ.

ಮೇ 29ರ ಕುತೂಹಲ
ಕಳೆದ ವರ್ಷ ಮೇ 29ರಂದು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು. ಈ ಬಾರಿ ಏನಾಗಬಹುದು? ಎಂಬ ಕುತೂಹಲ ಅನೇಕರಲ್ಲಿದೆ. ಮಂಗಳೂರು ನಗರದಲ್ಲಿ ಸುರಿದ ದಾಖಲೆಯ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿತ್ತು. ಹವಾಮಾನ ಇಲಾಖೆಯ ಸದ್ಯದ ಮಾಹಿತಿಯ ಪ್ರಕಾರ ಈ ವರ್ಷ ಮೇ 29ರಂದು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next