Advertisement

ಮಣಿಪಾಲದಲ್ಲಿ ಚಿರತೆ ಪ್ರತ್ಯಕ್ಷ; ಆತಂಕ

12:30 AM Feb 28, 2019 | |

ಮಣಿಪಾಲ: ಮಣಿಪಾಲದ ವಿದ್ಯಾರತ್ನ ನಗರ ಕೆಎಂಸಿ ಕಾರ್ಟರ್ಸ್‌ ಸಮೀಪ ನಿವೃತ್ತ ಪ್ರಾಧ್ಯಾಪಕ ಬಿ.ಜಿ. ಮೋಹನ್‌ದಾಸ್‌ ಅವರ ಮನೆಯ ಮುಂದೆ ಚಿರತೆ ಪ್ರತ್ಯಕ್ಷವಾಗಿದೆ. ಮನೆಗೆ ಅಳವಡಿಸಿರುವ ಸಿಸಿ ಕೆಮರಾದಲ್ಲಿ ಚಿರತೆ ಗೇಟ್‌ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ.

Advertisement

ಫೆ. 26ರಂದು ರಾತ್ರಿ 7.50ರ ಸುಮಾರಿಗೆ ಮೋಹನ್‌ದಾಸ್‌ ಅವರ ಮನೆಯ ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದ್ದವು. ಇದನ್ನು ಕೇಳಿ ಮೋಹನ್‌ದಾಸ್‌ ಬಂದಾಗ ಚಿರತೆ ಕಂಡುಬಂತು. ಅವರೂ ಬೊಬ್ಬೆ ಹೊಡೆದಾಗ ಚಿರತೆ ಓಡಿಹೋಯಿತು.

ನಾಯಿ ಹಿಡಿಯಲು ಪ್ರಯತ್ನ
ಚಿರತೆ ಗೇಟ್‌ ಮೂಲಕ ಒಳಪ್ರವೇಶಿಸಿ ನಾಯಿಯನ್ನು ಹಿಡಿದೊಯ್ಯಲು ಬಂದಿರುವ ಸಾಧ್ಯತೆ ಇದೆ. ಆದರೆ ಎರಡು ನಾಯಿಗಳು ಜೋರು ಬೊಗಳಿದ್ದರಿಂದ ಮತ್ತು ಮೋಹನ್‌ದಾಸ್‌ ಅವರೂ ಏರು ದನಿಯಲ್ಲಿ ಗದರಿದ್ದರಿಂದ ಚಿರತೆ ಓಡಿ ಹೋಗಿದೆ.ಹಿಂದೆಯೂ ಬಂದಿತ್ತು 2014ರ ಎಪ್ರಿಲ್‌ 8ರಂದು ಚಿರತೆಯೊಂದು ಇಲ್ಲಿನ ಕೆಎಂಸಿ ಕ್ವಾರ್ಟರ್ಸ್‌ ಒಳಗೆ ಪ್ರವೇಶಿಸಿ ಆತಂಕ ಮೂಡಿಸಿತ್ತು. ದೀರ್ಘ‌ ಕಾರ್ಯಾಚರಣೆ ಬಳಿಕ ಎ. 9ರಂದು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಈಗ ಮತ್ತೆ ಇದೇ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣ.

ನಾಯಿ, ದನದ ಮೇಲೆ ದಾಳಿ
ತಿಂಗಳ ಅವಧಿಯಲ್ಲಿ ಈ ಪರಿಸರದಲ್ಲಿ ಚಿರತೆ ನಾಯಿ ಹಾಗೂ ದನದ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದೆ. ಚಿರತೆ ಹಾವಳಿಯಿಂದಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

ಜಿಲ್ಲೆಯಲ್ಲಿ ಅರಿವಳಿಕೆ ತಜ್ಞರೇ ಇಲ್ಲ
ಕಾಡು ಪ್ರಾಣಿಗಳು ದಾಳಿ ನಡೆಸಿದಾಗ ಅವುಗಳಿಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲು ಉಡುಪಿ ಜಿಲ್ಲಾ ವ್ಯಾಪ್ತಿಯ ಅರಣ್ಯ ಇಲಾಖೆಯಲ್ಲಿ ಅರಿವಳಿಕೆ ತಜ್ಞರೇ (ತರಬೇತಿ ಪಡೆದ ಪಶು ವೈದ್ಯರು) ಇಲ್ಲ. ಶಿವಮೊಗ್ಗ ಮತ್ತು ಪಿಲಿಕುಳದಿಂದ ತಜ್ಞರನ್ನು ಕರೆಸಿಕೊಳ್ಳಬೇಕಾಗುತ್ತದೆ. ಇದರಿಂದ ಶೀಘ್ರ ಕಾರ್ಯಾಚರಣೆ ಅಸಾಧ್ಯವಾಗುತ್ತಿದ್ದು ಸಾರ್ವಜನಿಕರು ಮತ್ತು ಸಿಬಂದಿ ವ್ಯಥಾ ಪರದಾಡಬೇಕಾಗುತ್ತದೆ. ರಾಜ್ಯದಲ್ಲೇ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕೆಲವೇ ಅರಿವಳಿಕೆ ತಜ್ಞರಿದ್ದಾರೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಅರಿವಳಿಕೆ ತಜ್ಞರನ್ನು ನೇಮಿಸುವತ್ತ ಸರಕಾರ ಗಮನಹರಿಸಬೇಕಿದೆ. ಪೆರ್ಣಂಕಿಲದಲ್ಲಿ ಇತ್ತೀಚೆಗೆ ಉರುಳಿನಲ್ಲಿ ಸಿಲುಕಿದ್ದ ಚಿರತೆ ಸೆರೆ ಹಿಡಿಯುವ ವೇಳೆ ಅರಿವಳಿಕೆ ಇಲ್ಲದಿದ್ದುದರಿಂದ ಕಾರ್ಯಾಚರಣೆ ಸಂದರ್ಭ ಸಾವನ್ನಪ್ಪಿತ್ತು.

Advertisement

ಚಿರತೆಯಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಒಂದು ತಿಂಗಳಿಂದ ಚಿರತೆ ಹಾವಳಿ ಇರುವ ಬಗ್ಗೆ ಮಾಹಿತಿ ಇದೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.
-ಬಿ.ಜಿ. ಮೋಹನ್‌ದಾಸ್‌, ಮಣಿಪಾಲ

ಮಣಿಪಾಲದಲ್ಲಿ ಚಿರತೆ ಕಂಡು ಬಂದ ಮಾಹಿತಿ ಇದ್ದು ವಿವಿಧ ಸ್ಥಳಗಳಲ್ಲಿ ಮೂರು ಗೂಡುಗಳನ್ನು ಇರಿಸಲಾಗಿದೆ. ಸಿಬಂದಿಗೂ ಸೂಚನೆ ನೀಡಲಾಗಿದ್ದು ಕ್ರಮ ಜರಗಿಸಲಾಗುತ್ತಿದೆ. 
– ಕ್ಲಿಫ‌ರ್ಡ್‌ ಲೋಬೊ, ಆರ್‌ಎಫ್ಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next