ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾ.ಪಂ. ವ್ಯಾಪ್ತಿಯ ಬಸವನದುರ್ಗ ಗೂಗಿಬಂಡಿ ಪ್ರದೇಶಗಳಲ್ಲಿ ಚಿರತೆಗಳು ನಿರಂತರ ಪ್ರತ್ಯಕ್ಷವಾಗುವುದರಿಂದ ಜನರು ಭಯಭೀತಗೊಂಡಿದ್ದಾರೆ.
ಕಳೆದ ವರ್ಷ ಚಿರತೆ ಆನೆಗೊಂದಿ ಕಿಷ್ಕಿಂದೆ ಆಂಧ್ರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿ ಜನ -ಜಾನುವಾರುಗಳಿಗೆ ದಕ್ಕೆ ಮಾಡಿತ್ತು. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಸೇರಿದಂತೆ ದನಗಳನ್ನು ಮತ್ತು ಕುರಿ ಮೇಕೆಗಳನ್ನು ಚಿರತೆಗಳು ಹಿಡಿದು ಗಾಯಗೊಳಿಸಿ ಸಾವನ್ನಪ್ಪುವಂತೆ ಮಾಡಿದ್ದವು.
ಕಳೆದ ಮೂರು ದಿನಗಳಿಂದ ನಿತ್ಯವೂ ಗಂಗಾವತಿಯ ಸಿದ್ದಿಕೇರಿ ಮಲ್ಲಾಪುರ ರಾಂಪುರ ಮತ್ತು ಬಸವನದುರ್ಗ ಭಾಗದಲ್ಲಿ ಸುಮಾರು 6 ಕ್ಕೂ ಹೆಚ್ಚು ಚಿರತೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಉಂಟುಮಾಡಿವೆ.
ಈ ಕುರಿತು ತಾಲೂಕು ಆಡಳಿತ ಚಿರತೆಗಳನ್ನು ಸೆರೆ ಹಿಡಿಯಲು ಬೋನುಗಳನ್ನು ಇರಿಸುವಂತೆ ಆನೆಗೊಂದಿ ಗ್ರಾ.ಪಂ. ವತಿಯಿಂದ ಅರಣ್ಯ ಇಲಾಖೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೇರೆ ಕಡೆಯಿಂದ ಚಿರತೆಗಳನ್ನು ಇಲ್ಲಿ ಬಿಟ್ಟಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಸವನದುರ್ಗ ಗ್ರಾಮದ ಜನವಸತಿ ಪ್ರದೇಶದ ಗುಡ್ಡದ ಹತ್ತಿರ 6 ಚಿರತೆಗಳು ಪ್ರತ್ಯಕ್ಷವಾಗಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಆನೆಗೊಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಚಿರತೆ ಮತ್ತು ಕ್ರಡೆಗಳನ್ನು ಸೆರೆಹಿಡಿಯುವಲ್ಲಿ ಆಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಬೋನುಗಳನ್ನು ಇರಿಸಿ ಜನ ಮತ್ತು ಜಾನುವಾರುಗಳಿಗೆ ತೊಂದರೆ ಕೊಡುತ್ತಿರುವ ಚಿರತೆ ಮತ್ತು ಕರಡಿಗಳು ಸೆರೆಹಿಡಿಯುವಂತೆ ಆನೆಗೊಂದಿ ಗ್ರಾ.ಪಂ. ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ ಆಗ್ರಹಿಸಿದ್ದಾರೆ.