Advertisement

ವಿಧಾನಪರಿಷತ್‌ ಚುನಾವಣೆ: ಗೆಲುವಿನ ಹೊಣೆ ಉಸ್ತುವಾರಿಗಳಿಗೆ

02:09 AM Dec 02, 2021 | Team Udayavani |

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನುಗೆಲ್ಲಿಸಿಕೊಂಡು ಬರುವ ಹೊಣೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರದು.

Advertisement

ಚುನಾವಣೆ ಸಂಬಂಧ ಜಿಲ್ಲೆಗಳಿಗೆ ನಿಯೋಜನೆ ಆಗಿರುವ ಸಚಿವರಿಗೆ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೊಣೆ ಗಾರಿಕೆ ವಹಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗುವಂತೆ ನಿರ್ದೇಶನ ನೀಡಿದ್ದಾರೆ.

ಆಡಳಿತ ಪಕ್ಷ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ ಗಳಿಸುವುದು ಅನಿವಾರ್ಯ. ಹೀಗಾಗಿ ಪಕ್ಷದ ಅಭ್ಯರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಗೆಲ್ಲಿಸಿ ಕೊಡ ಬೇಕು. ಇಲ್ಲವಾದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲು ಪಕ್ಷ ನಿರ್ಧರಿಸಿದೆ. ಪರಿಷತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯಲು ಬಿಜೆಪಿಗೆ ಅವಕಾಶವಿದೆ. ಈ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ ಬಿಜೆಪಿ ಗೆದ್ದರೆ ಪರಿಷತ್ತಿನಲ್ಲಿಯೂ ಸ್ಪಷ್ಟ ಬಹುಮತ ದೊರೆಯಲಿದೆ.

ಸದ್ಯ ಮೇಲ್ಮನೆಯ 75 ಸ್ಥಾನಗಳ ಪೈಕಿ ಬಿಜೆಪಿ ಸದಸ್ಯರು 32 ಇದ್ದು, ಕಾಂಗ್ರೆಸ್‌ 28, ಜೆಡಿಎಸ್‌ 11; ಒಬ್ಬರು ಪಕ್ಷೇತರರು ಮತ್ತು ಒಬ್ಬರು ಸಭಾಪತಿ ಇದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಹಾಲಿ ಬಿಜೆಪಿಯ 6 ಜನ ಸದಸ್ಯರಿದ್ದು, ಈಗಿರುವ ಪರಿಷತ್‌ ಸಂಖ್ಯಾ ಬಲದ ಆಧಾರದಲ್ಲಿ ಬಹುಮತ ಪಡೆಯಲು ಆ ಆರು ಸ್ಥಾನಗಳನ್ನು ಗೆಲ್ಲುವುದರ ಜತೆಗೆ ಹೆಚ್ಚಿಗೆ 9 ಸ್ಥಾನ ಗೆಲ್ಲಬೇಕಿದೆ. ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನ ಗೆದ್ದರೆ ಮಾತ್ರ ಬಿಜೆಪಿ ಬಹುಮತ ಪಡೆಯಲು ಸಾಧ್ಯ.

ಇದನ್ನೂ ಓದಿ:ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

Advertisement

ಜಂಟಿ ತಂತ್ರ
ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಈ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಜಂಟಿ ಕಾರ್ಯತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಷದ ವತಿಯಿಂದ ಪ್ರಧಾನ ಕಾರ್ಯದರ್ಶಿಗಳಿಂದ ಬೂತ್‌ ಮಟ್ಟದ ಕಾರ್ಯಕರ್ತರ ವರೆಗೆ ಎಲ್ಲರೂ ಪಕ್ಷದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತ ಕೊಡಿಸಲು ಶ್ರಮಿಸಬೇಕು. ಆಯಾ ಜಿಲ್ಲೆಯ ಬಿಜೆಪಿ ಶಾಸಕರು ಜಿಲ್ಲೆಯಲ್ಲಿಯೇ ಇದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಬಿಜೆಪಿ ವರಿಷ್ಠರೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಬೆಂಬಲದ ವಿಶ್ವಾಸ
ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಬಿಜೆಪಿ ನಾಯಕರು ಜೆಡಿಎಸ್‌ಗೆ ಬಹಿರಂಗ ಮನವಿ ಮಾಡಿದ್ದಾರೆ. ಜೆಡಿಎಸ್‌ ನೇರವಾಗಿ ಭರವಸೆ ನೀಡದಿದ್ದರೂ ಪರೋಕ್ಷವಾಗಿ ಬೆಂಬಲಿಸುವ ವಿಶ್ವಾಸದಲ್ಲಿ ರಾಜ್ಯ ಬಿಜೆಪಿ ನಾಯಕರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗಳು ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡೆ ಪಕ್ಷಕ್ಕೆ ಪೂರಕವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next