ವಿಧಾನಸಭೆ : ಕಾಂಗ್ರೆಸ್-ಬಿಜೆಪಿ ಮಧ್ಯೆ ಸೈದ್ಧಾಂತಿಕ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕ (ಎಪಿಎಂಸಿ ಕಾಯಿದೆ )ಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು, ಶಿಕ್ಷೆ ಹಾಗೂ ದಂಡದ ವಿಚಾರಕ್ಕೆ ಸಂಬಂಧಪಟ್ಟಂತೆ ಉಭಯ ಪಕ್ಷದ ಶಾಸಕರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.
ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಎಪಿಎಂಸಿ ಕಾಯಿದೆಗೆ ಪೂರಕವಾಗಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾಯಿದೆ ಜಾರಿಗೊಳಿಸಿತ್ತು. ತಾನು ಅಧಿಕಾರಕ್ಕೆ ಬಂದರೆ ಎಪಿಎಂಸಿ ಕಾಯಿದೆ ರದ್ದುಗೊಳಿಸುತ್ತೇನೆ ಎಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆ ಪ್ರಕಾರವೇ ಈಗ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಎಪಿಎಂಸಿಯಿಂದ ಹೊರಗೆ ಕೃಷಿ ಉತ್ಪನ್ನಗಳ ಕ್ರಯ-ವಿಕ್ರಯ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ಸೋಮವಾರ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದರು. ಹೊಸ ಕಾಯಿದೆ ಪ್ರಕಾರ ಎಪಿಎಂಸಿ ಮಾರಾಟ ನಿಯಮ ಉಲ್ಲಂಘನೆ ಮಾಡುವವರಿಗೆ ಈ ಮೊದಲು 6 ತಿಂಗಳು ಶಿಕ್ಷೆ ವಿಧಿಸಲಾಗುತ್ತಿತ್ತು. ಈಗ ಅದನ್ನು ಮೂರು ತಿಂಗಳಿಗೆ ಇಳಿಕೆ ಮಾಡಲಾಗಿದೆ. ಜತೆಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಗೆ ತಪ್ಪು ಮರುಕಳಿಸಿದರೆ 20 ಸಾವಿರ ರೂ. ದಂಡ ಮೂರನೇ ಬಾರಿಗೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಾಗಿದೆ. ಈ ಕಾಯಿದೆಯ ಮೂಲಕ ಎಪಿಎಂಸಿಗಳ ಗತ ವೈಭವವನ್ನು ಮರು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
2020ಕ್ಕೆ ಮುನ್ನ ಇದೇ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಹಿಂದಿನ ಸರ್ಕಾರ ಕೇಂದ್ರದ ಆಣತಿಯ ಪ್ರಕಾರ ಸುಗ್ರೀವಾಜ್ಞೆ ತಂದು ಜಾರಿ ಮಾಡಿತು, ಬಳಿಕ ಕಾನೂನಿನ ಸ್ವರೂಪ ಕೊಟ್ಟಿತು. ಕೇಂದ್ರ ಸರ್ಕಾರ ರೈತರ ಹೋರಾಟ ಮಾಡಿದ್ದರಿಂದ ಈ ಕಾನೂನು ಹಿಂಪಡೆಯಿತು.ಗುಜರಾತ, ಕರ್ನಾಟಕ ಹಾಗೂ ರಾಜ್ಯ ಹೊರತುಪಡಿಸಿದರೆ ಬೇರೆ ಕಡೆ ಈ ಕಾನೂನು ಉಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ತಿದ್ದುಪಡಿ ಜಾರಿಗೆ ತರುತ್ತಿದ್ದೇವೆ ಎಂದು ವಿವರಿಸಿದರು.
ಮಾಜಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಹೊಸ ಸಚಿವರು ಅಧ್ಯಯನ ಮಾಡಿದ್ದರೆ ಕಾನೂನು ಹಿಂಪಡೆಯುತ್ತಿರಲಿಲ್ಲ. ರೈತನಿಗೆ ಪೂರ್ಣ ಸ್ವಾತಂತ್ರ್ಯ ಸಿಗಬೇಕು, ಅವನು ಬೆಳೆದಲ್ಲೇ ಮಾರಾಟ ಮಾಡಬೇಕೆಂದು ಸ್ವಾತಂತ್ರ್ಯ ನೀಡಲಾಗಿತ್ತು. ರೈತರಿಗೆ ಅಧಿಕಾರ ಕೊಡುವ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಇದು ರೈತ ವಿರೋಧಿ ಎಂದು ಆಕ್ರೋಶ ವ್ಯಕ್ರಪಡಿಸಿದರು.
ಈ ಹಂತದಲ್ಲಿ ಮಾತನಾಡಿದ ಜೆಡಿಎಸ್‌ನ ಎಚ್.ಡಿ.ರೇವಣ್ಣ, ದಲ್ಲಾಳಿಗಳ ಜತೆ ಸೇರಿ ವಿಧೇಯಕ ತರುತ್ತಿದ್ದಾರೆ. ರೈತರ ಪರ ಕಾಳಜಿ ಇಲ್ಲ. ರೈತರು ಶೋಷಣೆಗೊಳಗಾಗುತ್ತಾರೆ. ಎಪಿಎಂಸಿ ಬಲಪಡಿಸಲಿ. ಆದರೆ ರೈತರಿಗೆ ತೊಂದರೆಯಾಗದಿರಲಿ. ಆತುರ ಬೇಡ. ರೈತ ಮುಖಂಡರ ಜತೆಯೂ ಚರ್ಚೆ ಮಾಡಲಿ. ರೈತರ ಮನೆ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆಗೆ ಆಗ್ರಹಿಸಿ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದರು. ನಂತರ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಸ್ಪೀಕರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ಬಳಿಕ ಕಲಾಪ ಪ್ರಾರಂಭವಾದರೂ ವಿಪಕ್ಷಗಳ ಪ್ರತಿಭಟನೆಯ ಮಧ್ಯೆಯೇ ವಿಧೇಯಕ ಅಂಗೀಕಾರಗೊಂಡಿತು.