ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಕಲಬುರ್ಗಿ ಜಿಲ್ಲೆಯಲ್ಲಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ವಿರುದ್ಧ ಪರಿಸರ ಮಾಲಿನ್ಯ ಮಂಡಳಿ ಕಾನೂನು ಪ್ರಕಾರ ನೋಟಿಸ್ ನೀಡಿ ಬಂದ್ ಮಾಡಿಸಿದೆ. ಸರಿ ಇಲ್ಲ ಎಂದಾದರೆ ಅವರು ನ್ಯಾಯಾಲಯದ ಮೊರೆ ಹೋಗಲಿ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಿಸರಕ್ಕೆ ಹಾನಿಯಾದ ಕಾರಣಕ್ಕೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ, ಕಾರ್ಖಾನೆ ಬಂದ್ ಮಾಡಿಸಿದೆ. ಇಷ್ಟಕ್ಕೂ ಸದರಿ ಮಂಡಳಿ ಅಧ್ಯಕ್ಷರು ಬಿಜೆಪಿ ಸರ್ಕಾರದಲ್ಲೇ ನೇಮಕವಾಗಿರುವವರೇ ಹೊರತು ಕಾಂಗ್ರೆಸ್ ಅವಧಿಯಲ್ಲಿ ನೇಮಕವಾದವರಲ್ಲ. ಹೀಗಾಗಿ ಇದರಲ್ಲಿ ಬಿಜೆಪಿ ಪಕ್ಷದವರ ಕೈವಾಡ ಇರಬಹುದು ಎಂದು ಯತ್ನಾಳಗೆ ತಿರುಗೇಟು ನೀಡಿದರು.
ಮಂಡಳಿ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದೆ, ಯತ್ನಾಳ ಕಾರ್ಖಾನೆ, ಎಂ.ಬಿ.ಪಾಟೀಲ ಕಾರ್ಖಾನೆ ಹೀಗೆ ಯಾರದ್ದೇ ಕಾರ್ಖಾನೆ ಇದ್ದರೂ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳತ್ತದೆ. ಕೈಗೊಂಡ ಕ್ರಮ ಸರಿ ಇಲ್ಲ ಎಂದಾದರೆ ಅವರು ನ್ಯಾಯಲಯದ ಮೊರೆ ಹೋಗಲಿ ಎಂದರು.