ಹಾವೇರಿ: ದೈನಂದಿನ ಜೀವನಕ್ಕೆ ಅಗತ್ಯ ಕಾನೂನುಗಳನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ. ಸದಾನಂದಸ್ವಾಮಿ ಹೇಳಿದರು. ಜಿಲ್ಲಾ ಕಾರಾಗೃಹದಲ್ಲಿನ ಮಹಿಳಾ ಕೈದಿಗಳು ಮತ್ತು ಅವರೊಂದಿಗಿರುವ ಮಕ್ಕಳಿಗಾಗಿ ಆಯೋಜಿಸಿದ್ದ 10 ದಿನಗಳ ಕಾನೂನು ಸೇವೆಗಳ ಅರಿವು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳಾ ಬಂಧಿ ಗಳು 10 ದಿನಗಳಲ್ಲಿ ಕಾನೂನಿನ ಅರಿವು ಕುರಿತಂತೆ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ತಿಳಿದುಕೊಂಡ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಂಡು, ಜೈಲಿನಿಂದ ಬಿಡುಗಡೆಯಾಗಿ ಹೊರಹೋದ ಮೇಲೆ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಕಾನೂನಿನ ಬಗ್ಗೆ ಎಲ್ಲ ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ನಿಮ್ಮ ಜೀವನಕ್ಕೆ ಅವಶ್ಯವಿದ್ದಷ್ಟು ಮಾಹಿತಿ ತಿಳಿದುಕೊಳ್ಳ ಸಾಮಾನ್ಯ ಕಾನೂನಿನ ಅರಿವು ಹೊಂದಿದರೆ ಉತ್ತಮ ನಾಗರಿಕರಾಗಿ ಬಾಳಬಹುದು. ಮನೆಗಳಲ್ಲಾಗುವ ಪ್ರತಿ ಜನನ-ಮರಣಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಇದರಿಂದ ಆಸ್ತಿ ಹಂಚಿಕೆಯನ್ನೊಳಗೊಂಡ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮಾತನಾಡಿ, ಸಾಂದರ್ಭಿಕವಾಗಿ ತಪ್ಪೆಸಗಿ ಕೆಟ್ಟ ಘಳಿಗೆಯಲ್ಲಿ ಅಪರಾಧಿಗಳಾಗಿ ಬಂಧಿಗಳಾಗಿರುವಿರಿ. ಭವಿಷ್ಯದಲ್ಲಿ ನಿಮ್ಮಿಂದ ಇಂತಹ ತಪ್ಪುಗಳು ನಡೆಯದಿರಲಿ ಎನ್ನುವ ಸದುದ್ದೇಶದಿಂದ ಆಯೋಜಿಸಿರುವ ಕಾನೂನು ಅರಿವು ನೆರವು ಉತ್ತಮ ಕಾರ್ಯವಾಗಿದೆ ಎಂದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯೆ ವೈ.ಎಲ್. ಲಾಡಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿಯಲ್ಲಿ ಭಾಗವಹಿಸಿದ್ದ ಜೈಲಿನ ಕೈದಿಗಳು ಮಾತನಾಡಿ, 10 ದಿನಗಳಲ್ಲಿ ನಮಗೆ ಅವಶ್ಯವಿರುವ ಕಾನೂನುಗಳ ಬಗ್ಗೆ ವಕೀಲರು ತಿಳುವಳಿಕೆ ನೀಡಿದ್ದಾರೆ. ವಿವಿಧ ಅಧಿಕಾರಿಗಳು, ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯೊಂದಿಗೆ ಕರಕುಶಲ ತರಬೇತಿ ಸಹ ನೀಡಿದ್ದಾರೆ ಎಂದರು.
ವಕೀಲರಾದ ವಿ.ಎಸ್. ಕೋಣನಹಳ್ಳಿ, ಮನೋರೋಗ ತಜ್ಞೆ ಪಿ.ಲೀಲಾ, ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷೆ ನಾಗರತ್ನಾ ಧಾರವಾಡಕರ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ. ನೀರಲಗಿ, ಕಾರ್ಯದರ್ಶಿ ದೇವರಾಯ ಎನ್. ನಾಯ್ಡು, ವಕೀಲರಾದ ಬಿ.ಟಿ. ಬಿಳಿಯಣ್ಣನವರ, ರಾಜೇಶ್ವರಿ ಚಕ್ಕಳ್ಳೇರ, ಮಂಗಳಾ ಕಮ್ಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ, ಜಿಲ್ಲಾ ಕಾರಾಗೃಹದ ಮುಖ್ಯ ವಾರ್ಡನ್ ಆರ್.ವೈ. ಕೋಪರ್ಡಿ, ಶಿಕ್ಷಣ ಇಲಾಖೆಯ ಎಚ್.ಸಿ. ರಾಜಣ್ಣ, ಇನ್ಸಪೆಕ್ಟರ್ ಕೆ.ಆರ್. ಗೋವಿಂದಪ್ಪ, ಪ್ರೊಬೇಷನರಿ ಸಿವಿಲ್ ನ್ಯಾಯಾಧೀಶ ನಾಗರಾಜ ಬಾರ್ಕಿ, ಸಚಿನ್ ಶಿವಪೂಜಿ, ಶಾರದಾ ಕೊಪ್ಪದ ಇತರರು ಇದ್ದರು.