Advertisement

Legal Action: ಮುನಿರತ್ನ ವಿಧಾನಸಭೆ ಸದಸ್ಯತ್ವ ಅಮಾನತು?

12:46 AM Sep 24, 2024 | Team Udayavani |

ಬೆಂಗಳೂರು: ದಿನದಿಂದ ದಿನಕ್ಕೆ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮದ ಕುಣಿಕೆ ಬಿಗಿಯಾಗುತ್ತಿದ್ದು, ಮುಂದುವರಿದ ಭಾಗವಾಗಿ ಅವರ ಮೇಲೆ ಈಗ ವಿಧಾನಸಭೆ ಸದಸ್ಯತ್ವ ಸ್ಥಾನದ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ.

Advertisement

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಸೋಮವಾರ ಮುನಿರತ್ನ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಅಮಾನತುಗೊಳಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರಕಾರ ಮುನಿರತ್ನ ಶಾಸಕತ್ವ ಅಮಾನತು ಕ್ರಮಕ್ಕೆ ಮುಂದಡಿ ಇಟ್ಟಿದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧಃಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ, ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ. ಆದ್ದರಿಂದ ಸಭಾಧ್ಯಕ್ಷರು ತಮಗೆ ಸಂವಿಧಾನದತ್ತವಾಗಿ ಪ್ರದತ್ತವಾಗಿರುವ ಪರಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಲೋಕಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಅವರು ಲಂಚ ಪ್ರಕರಣದಲ್ಲಿ 17 ಸಂಸದರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಸನ್ನಿವೇಶವನ್ನು ಉಲ್ಲೇಖೀಸಿರುವ ಸಚಿವ ಎಚ್‌.ಕೆ.ಪಾಟೀಲ್‌, ಅಂದು ಸಂಸತ್ತು ಹಾಕಿದ್ದ ಮೇಲ್ಪಂಕ್ತಿಯು ಇಂತಹ (ಮುನಿರತ್ನ ಪ್ರಕರಣದಂತಹ) ಘಟನೆಗಳು ನಡೆದಾಗ ಕರ್ನಾಟಕಕ್ಕೆ ಮಾರ್ಗದರ್ಶಕವಾಗಬೇಕಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಶಾಸಕರ ಹಕ್ಕುಬಾಧ್ಯತೆಗಳ ದುರುಪಯೋಗದ ಘಟನೆ ಇದೇ ಮೊದಲಲ್ಲ. ಕೆಜಿಎಫ್ ಶಾಸಕರಾಗಿದ್ದ ಸಂಪಂಗಿ ಅವರು ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದ ಘಟನೆ ಜನಮಾನಸದಿಂದ ಇನ್ನೂ ಮಾಸಿಲ್ಲ. ಆ ಪ್ರಕರಣ ಕರ್ನಾಟಕ ಶಾಸಕಾಂಗ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ. ಅಂದು ಅಧಿಕಾರದಲ್ಲಿದ್ದ ರಾಜಕೀಯ ಪಕ್ಷವು, ಶಾಸಕರು ಲಂಚ ಸ್ವೀಕರಿಸಿದ ಸ್ಥಳ ಶಾಸಕರ ಭವನವು ವಿಧಾನಮಂಡಲ ಆವರಣದ ಭಾಗ ಎಂದು ಘೋಷಿಸಿ ನಿಯಮಗಳಿಗೆ ತಿದ್ದುಪಡಿ ಮಾಡಲೂ ಕಾರಣವಾಗಿತ್ತು ಎಂದು ತೀಕ್ಷ್ಣವಾಗಿ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

ಅಸಭ್ಯ ವರ್ತನೆ ಕಡಿವಾಣಕ್ಕೆ ಸಮಿತಿ?
ಶಾಸಕರ ಅಸಭ್ಯ ವರ್ತನೆಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ “ನೀತಿ-ನಿರೂಪಣಾ ಸಮಿತಿ’ಯ ಆವಶ್ಯಕತೆ ಇದೆ ಎಂದೂ ಎಚ್‌.ಕೆ. ಪಾಟೀಲ್‌ ಪ್ರತಿಪಾದಿಸಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತತ್‌ಕ್ಷಣ ರಚಿಸಬೇಕು. ಆ ಸಮಿತಿ ಮೂಲಕ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿನ ಕ್ರಮಗಳ ಕಡಿವಾಣ ಹಾಕಬೇಕು ಎಂದು ಅವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next