ಚಿಂತಾಮಣಿ: ಬರಪೀಡಿತ ಬಯಲು ಸೀಮೆ ಪ್ರದೇಶದಲ್ಲಿ ಕುಡಿವ ನೀರಿನ ಅಭಾವ ದಿನೇ ದಿನೆ ಹೆಚ್ಚಾಗುತ್ತಿದ್ದು ಅಧಿಕಾರಿಗಳು ಸಬೂಬು ಹೇಳದೇ, ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಸಮರ್ಪಕವಾಗಿ ನೀರು ಪೂರೈಸಬೇಕು. ಇಲ್ಲದಿದ್ದರೆ ಕಾನೂನಿನ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಸಂಜೀವ ಕುಮಾರ್ ಹಂಚಾಟಿ ಎಚ್ಚರಿಸಿದರು.
ತಾಲೂಕಿನ ಮುರುಗಮಲ್ಲ ಹೋಬಳಿ ಪೆದ್ದೂರು ಗ್ರಾಮದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಚಿಂತಾಮಣಿ ತಾಪಂ ಹಾಗೂ ಪೆದ್ದೂರು ಗ್ರಾಪಂ ಸಂಯುಕ್ತಾಶ್ರಯದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಹಾಗೂ ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡರ ಮನವಿಯಂತೆ ಪೆದ್ದೂರು ಗ್ರಾಪಂನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಬರ ಜಿಲ್ಲೆಗಳಿಗೆ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ, ಗ್ರಾಪಂ, ತಾಪಂ ಮತ್ತು ಜಿಪಂ ಅಧಿಕಾರಿಗಳು ಅನುದಾನದ ಕೊರತೆ ಇದೆ ಎಂದು ಜನಪ್ರತಿನಿಧಿಗಳ ರಾಜಕೀಯ ಒತ್ತಡಗಳಿಗೆ ಮಣಿದು, ಇರುವ ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳದೇ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ನಾಗರಿಕರು ದೂರಿದ್ದಾರೆಂದರು. ಅಧಿಕಾರಿಗಳು ಯಾವುದೇ ಸುಳ್ಳು ಹೇಳದೆ ಸಕ್ರೀಯವಾಗಿ ಕಾರ್ಯನಿರ್ವಹಿಸಿ, ಅನುದಾನ ಸದ್ಬಳಕೆ ಮಾಡಿಕೊಂಡು ಜನತೆಗೆ ನೀರಿನ ಸೌಲಭ್ಯ ಪೂರೈಸಿ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸಭೆಗಳಲ್ಲಿ ನೀರಿನ ಬಗ್ಗೆ ಚಿಂತನೆ ಮಾಡಿ: ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ತಮಗೆ ಎಷ್ಟು ಆದಾಯ ಬರುತ್ತದೆ ಎಂಬುದನ್ನು ಬಿಟ್ಟು, ತಮ್ಮ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದಾಗ ಗ್ರಾಮಗಳು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
ಚೆಕ್ ಡ್ಯಾಂ ನಿರ್ಮಿಸಿ: ಮಳೆಗಾಲದಲ್ಲಿ ಬೀಳುವ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ, ತಮ್ಮಮ್ಮ ಗ್ರಾಮಗಳ ಬಳಿ ಚೆಕ್ ಡ್ಯಾಂ ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.
ದತ್ತು ಪಡೆಯುತ್ತೇವೆ: ಪೆದ್ದೂರು ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಿತರ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಪೆದ್ದೂರು ಗ್ರಾಪಂನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಾಗುವುದೆಂದರು. ಚಿಂತಾಮಣಿ ತಾಪಂ ಇಒ ಶ್ರೀನಿವಾಸನ್, ಕುಡಿಯುವ ನೀರಿಗೆ ಮೊದಲ ಆದ್ಯತೆ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೊಸ ಕೊಳವೆ ಬಾವಿಗಳನ್ನೂ ಕೊರೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ತಾಲೂಕು ಕಾನೂನು ಸೇವಾ ಸಮಿತಿ ಗೌರವಾನ್ವಿತ ಅಧ್ಯಕ್ಷ ನಾ.ರಾಜೇಂದ್ರಕುಮಾರ್ ಕೆ.ಎಂ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ವೆಂಕಟರವಣಪ್ಪ, ಪೆದ್ದೂರು ಗ್ರಾಪಂ ಅಧ್ಯಕ್ಷ ಶಂಕರಪ್ಪ, ಮುಖಂಡರಾದ ನಾಗರಾಜರೆಡ್ಡಿ, ಶ್ರೀರಾಮರೆಡ್ಡಿ, ಮಲ್ಲಿಕಾರ್ಜುನ, ಪಿಡಿಒ ಕರಿಬಸಪ್ಪ ಮತ್ತಿತರರಿದ್ದರು.
11 ಲಕ್ಷ ಸಸಿ ನೆಡುವ ಗುರಿ: ಈ ಬಾರಿ ತಾಲೂಕಿನಲ್ಲಿ 11 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದು, ಮಳೆಗಾಲದಲ್ಲಿ ಬೀಳುವ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ವೃದ್ಧಿಗೊಳಿಸಲು ಈಗಾಗಲೇ ತಾಲೂಕಿನಲ್ಲಿನ ಎಲ್ಲಾ ಕಲ್ಯಾಣಿಗಳನ್ನು ಸ್ವತ್ಛತೆ ಮಾಡಲು ಮುಂದಾಗಿದ್ದೇವೆ. ಸಾರ್ವಜನಿಕರು ಇಂಗು ಗುಂಡಿ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ ಮಾಡುವುದಾದರೇ ಕೂಡಲೇ ಕಾಮಗಾರಿಗಳಿಗೆ ಆದೇಶಪತ್ರ ನೀಡಲಾಗುವುದು. ರೈತರಿಗೆ ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳಿಂದ ಹಲವು ಯೋಜನೆಗಳು ಜಾರಿಯಲ್ಲಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದು ಚಿಂತಾಮಣಿ ತಾಪಂ ಇಒ ಶ್ರೀನಿವಾಸನ್ ತಿಳಿಸಿದರು.