ಶಿಡ್ಲಘಟ್ಟ: ಯಾವುದೇ ವ್ಯಕ್ತಿ ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಸೂಚಿಸಿದರು.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಶಿಡ್ಲಘಟ್ಟ ತಾಲೂಕಿನ ಕಸಬಾ ಹೋಬಳಿಯ ಗೆಜ್ಜಿಗಾನಹಳ್ಳಿ ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದ್ಯಪಾನ ಸೇವಿಸುವುದರಿಂದ ತಮ್ಮ ಆರೋಗ್ಯ ಹಾಗೂ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅಲ್ಲದೆ, ಅಕ್ರಮ ಮದ್ಯಪಾನ ಮಾರಾಟ ಮಾಡುವುದು ಅಪರಾಧ. ಈ ನಿಟ್ಟಿನಲ್ಲಿ ಮದ್ಯಪಾನ ಸೇವನೆಗೆ ದಾಸರಾಗದೇ ಉತ್ತಮ ಆರೋಗ್ಯಕ್ಕೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ನಿವೇಶನ ರಹಿತರಿಗೆ 2 ಎಕರೆ ಮಂಜೂರು: ಸರ್ಕಾರವು ಗ್ರಾಮದ ಎಲ್ಲಾ ಸಮುದಾಯಕ್ಕೂ ಸೇರಿ ಸಾರ್ವಜನಿಕ ಸ್ಮಶಾನ ನೀಡುತ್ತಿದೆ. ಗೆಜ್ಜಿಗಾನಹಳ್ಳಿ ಗ್ರಾಮಕ್ಕೆ 37 ಕುಂಟೆ ಜಮೀನು ನೀಡಲಾಗಿದೆ. ಅಲ್ಲದೆ, ಗ್ರಾಮದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು 2 ಎಕರೆ ಜಮೀನು ಈಗಾಗಲೇ ಮಂಜೂರು ಮಾಡಿದ್ದು, ಫಲಾನುಭವಿಗಳನ್ನು ಗ್ರಾಮಸಭೆಗಳ ಮೂಲಕ ಗುರ್ತಿಸಲಾಗುವುದು ಎಂದು ಹೇಳಿದರು.
ಕೆಎಂಎಫ್ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಪಂ ಇಒ ಮುನಿರಾಜು, ಜಿಲ್ಲಾ ಆಹಾರ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಉಪ ನಿರ್ದೇಶಕಿ ಅನುರಾಧ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯತ್ರಿ, ತೋಟಗಾರಿಕೆ ಅಧಿಕಾರಿ ರಮೇಶ್, ಮುಖಂಡರಾದ ಶೀಗೆಹಳ್ಳಿ ಬಸವರಾಜ್, ಸಿಡಿಪಿಒ ನೌತಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಬಿಸಿಎಂ ಅಧಿಕಾರಿ ನಾರಾಯಣಪ್ಪ, ಕೃಷಿ ಅಧಿಕಾರಿ ವೀಣಾ, ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ದೇವರಾಜ್, ಸದಸ್ಯರು ಉಪಸ್ಥಿತರಿದ್ದರು.