ನಾನು ಸಿನೆಮಾ ರಂಗಕ್ಕೆ ಬಂದ ಆರಂಭದಲ್ಲೇ ಪರಿಚಯವಾದವರು ಲೀಲಾವತಿ. ಸುಮಾರು 50 ವರ್ಷಗಳ ಹಿಂದೆ ಆರಂಭವಾದ ನಮ್ಮ ಬಾಂಧವ್ಯ ಇಂದಿನವರೆಗೂ ಮುಂದುವರಿದಿದೆ. ಆಗ ಕನ್ನಡ ಚಿತ್ರರಂಗ ಮದ್ರಾಸ್‌ನಲ್ಲಿ ಕೇಂದ್ರೀಕೃತವಾಗಿತ್ತು. ಕನ್ನಡ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಅಲ್ಲಿಯೇ ನಡೆಯುತ್ತಿದ್ದುದರಿಂದ ಕನ್ನಡದ ಬಹುತೇಕ ಕಲಾವಿದರು, ತಂತ್ರಜ್ಞರು ಅಲ್ಲಿಯೇ ಹೆಚ್ಚಾಗಿ ವಾಸ ಮಾಡುತ್ತಿದ್ದರು. ನಮ್ಮ ಕುಟುಂಬ ಕೂಡ ಮದ್ರಾಸಿನಲ್ಲೇ ವಾಸ್ತವ್ಯವಿತ್ತು. ಅಲ್ಲೂ ನಮ್ಮ ಮನೆ ಮತ್ತು ಲೀಲಾವತಿ ಅವರ ಮನೆ ತುಂಬಾ ಹತ್ತಿರದಲ್ಲೇ ಇದ್ದವು. ಹೀಗೆ ಆರಂಭದಿಂದಲೇ ನಮ್ಮ ನಡುವೆ ಒಂದು ಸೌಹಾರ್ದಯುತ ಬಾಂಧವ್ಯ ಬೆಳೆಯಿತು.
ಅದೇ ಬಾಂಧವ್ಯ ಮದ್ರಾಸಿನಿಂದ ಬೆಂಗಳೂರಿಗೆ ಬಂದ ಮೇಲೂ ಮುಂದುವರಿಯಿತು. ಕೇವಲ ಚಿತ್ರರಂಗ, ವೃತ್ತಿ ಬದುಕಿನಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಲೀಲಾವತಿ ಅವರು ನಮ್ಮ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವರು. ನಮ್ಮ ಮನೆಯ ಸುಖ-ದುಃಖ, ಎಲ್ಲದರಲ್ಲೂ ಲೀಲಾವತಿ ಮತ್ತು ಅವರ ಮಗ ವಿನೋದ್ ಸಹಭಾಗಿಯಾಗುತ್ತಿದ್ದರು.
ನಾನು ಕಂಡಂತೆ ಲೀಲಾವತಿ ಅವರು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂಥವರು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಿಭಾಯಿಸಿ ಸೈ ಎನಿಸಿಕೊಳ್ಳಬಲ್ಲ ಅಪರೂಪದ ಕಲಾವಿದೆ. ಚಿತ್ರರಂಗದ ಯಾವುದೇ ಹಿನ್ನೆಲೆಯಿಲ್ಲದೆಯೂ ಆಗಿನ ಕಾಲದಲ್ಲಿ ದೊಡ್ಡ ತಾರೆಯಾಗಿ ಮಿಂಚಿದ್ದರೂ ಎಂದಿಗೂ ಕೀರ್ತಿ, ಪ್ರಸಿದ್ಧಿ, ಜನಪ್ರಿಯತೆ ಯಾವುದನ್ನೂ ತಲೆಗೆ ಅಂಟಿಸಿಕೊಂಡವರಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂದು ಸರಳವಾಗಿ ಬದುಕಿ ಇಂದಿನ ತಲೆಮಾರಿನ ಕಲಾವಿದರಿಗೂ ಮಾದರಿಯಾಗಿ ಬದುಕಿದ ವ್ಯಕ್ತಿತ್ವ ಅವರದು.
ಕನ್ನಡ ಚಿತ್ರರಂಗದಲ್ಲಿ “ಎವರ್‌ಗ್ರೀನ್ ಜೋಡಿ’ ಎಂದರೆ ಇಂದಿಗೂ ಮೊದಲಿಗೆ ನೆನಪಿಗೆ ಬರುವುದು ಡಾ| ರಾಜಕುಮಾರ್ ಮತ್ತು ಲೀಲಾವತಿ. ತೆರೆಯ ಮೇಲೆ ಅವರಿಬ್ಬರ ಕಾಂಬಿನೇಶನ್ ಸಿನೆಮಾಗಳನ್ನು ನೋಡಿ ಕಣ್ತುಂಬಿಕೊಳ್ಳುವುದು ಆಗಿನ ಕಾಲದಲ್ಲಿ ಪ್ರೇಕ್ಷಕರಿಗೆ ಪರಮಾನಂದ. ರಾಜಕುಮಾರ್ -ಲೀಲಾವತಿ ಜೋಡಿಯ ಸಿನೆಮಾಗಳನ್ನು ನೋಡಲು ಪ್ರೇಕ್ಷಕರು, ಅಭಿಮಾನಿಗಳು ಮಾತ್ರವಲ್ಲ; ಇಡೀ ಚಿತ್ರರಂಗ ತುದಿಗಾಲಿನಲ್ಲಿರುತ್ತಿತ್ತು. ಬಹುತೇಕ ನಟಿಯರು ಒಮ್ಮೆ ನಾಯಕಿಯಾದರೆ ಮತ್ತೆ ಅಂಥದ್ದೇ ಪಾತ್ರಗಳನ್ನು ನಿರೀಕ್ಷಿಸುತ್ತಾರೆ. ಆದರೆ ಲೀಲಾವತಿ ಮಾತ್ರ ಯಾವತ್ತೂ ನಾಯಕಿಯಾಗಿ ಗುರುತಿಸಿಕೊಳ್ಳದೆ, ಅಪ್ಪಟ ಕಲಾವಿದೆಯಾಗಿಯೇ ಇದ್ದರು. ಹೀಗಾಗಿಯೇ ತಾನು ನಾಯಕಿಯಾಗಿ ಅಭಿನಯಿಸುತ್ತಿರುವಾಗಲೇ ಪೋಷಕ ಪಾತ್ರಗಳು, ತನಗೆ ಖುಷಿ ಕೊಡುವಂಥ ಇತರ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದರು. ಒಬ್ಬ ನೈಜ ಕಲಾವಿದೆಗೆ ಇರಬೇಕಾದ ಗುಣ ಅದು. ಅದನ್ನು ನಾನು ಲೀಲಾವತಿ ಅವರಲ್ಲಿ ಸದಾ ಕಾಣುತ್ತಿದ್ದೆ. ಹೀಗಾಗಿಯೇ ನನ್ನ ಬಹುತೇಕ ಸಿನೆಮಾಗಳಲ್ಲಿ ಲೀಲಾವತಿ ಅವರಿಗೆ ಒಂದು ವಿಶೇಷ ಪಾತ್ರ ಇರುತ್ತಿತ್ತು. ನನ್ನ ಬಹುತೇಕ ಸಿನೆಮಾಗಳಲ್ಲಿ ಅವರು ತಾಯಿಯ ಪಾತ್ರ ನಿಭಾಯಿಸಿದ್ದರು.
ವೈಯಕ್ತಿಕವಾಗಿ ಲೀಲಾವತಿ ಅವರದು ತುಂಬ ಸ್ನೇಹಮಯ, ಮೃದು ಸ್ವಭಾವದ, ಮಾತೃ ಹೃದಯದ ವ್ಯಕ್ತಿತ್ವ. ಅದೇ ಕಾರಣಕ್ಕೆ ಅವರು ಎಲ್ಲ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರಿಗೆ ಇಷ್ಟವಾಗುತ್ತಿದ್ದರು. ನಿಜವಾಗಿಯೂ ಹೆತ್ತ ತಾಯಿಯಂತೆಯೇ ಎಲ್ಲರನ್ನೂ ಆದರಿಸಿ, ಅಪ್ಪಿಕೊಳ್ಳುವ ಅವರ ಮಾತೃಪ್ರೇಮಕ್ಕೆ ಬೆಲೆ ಕಟ್ಟಲಾಗದು. ನಮ್ಮ ಚಿತ್ರರಂಗಕ್ಕೆ ಲೀಲಾವತಿ ಒಂದರ್ಥದಲ್ಲಿ ತಾಯಿಯ ಸ್ಥಾನ ತುಂಬಿದವರು. ತಮ್ಮ ಮಗ ವಿನೋದ್ ರಾಜ್‌ಗೂ ಲೀಲಾವತಿ ಅದೇ ಸಂಸ್ಕಾರ, ನಡೆ-ನುಡಿ ಕಲಿಸಿದ್ದಾರೆ.
ಇಂತಹ ಲೀಲಾವತಿ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಟು ಹೋಗಿದ್ದಾರೆ ಎನ್ನುವುದನ್ನು ನಂಬಲಾಗುತ್ತಿಲ್ಲ. ಆದರೂ ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕು. ಲೀಲಾವತಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ತಮ್ಮ ಸಿನೆಮಾಗಳು, ಪಾತ್ರಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ನೈಜ ಕಲಾವಿದರಿಗೆ ಎಂದಿಗೂ ಸಾವಿಲ್ಲ. ಕಲೆಯಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ. ಅಂತೆಯೇ ಲೀಲಾವತಿ ಕೂಡ!
ದ್ವಾರಕೀಶ್, ನಟ,ನಿರ್ದೇಶಕ,ನಿರ್ಮಾಪಕ