Advertisement

ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ

10:21 PM Sep 22, 2020 | mahesh |

ಕಾರ್ಕಳ: ವೃತ್ತಿಗೆ ವಿದಾಯ ಹೇಳುವ ಹೊತ್ತು ಪ್ರತಿಯೊಬ್ಬರ ಬದುಕಿನಲ್ಲೂ ಮಹತ್ವದ್ದು. ಇದನ್ನು ಅತ್ಯಂತ ಸ್ಮರಣೀಯವನ್ನಾಗಿಸುವ ವಿನೂತನ ಪ್ರಯತ್ನವೊಂದು ಕಾರ್ಕಳ ಶಿಕ್ಷಣ ಇಲಾಖೆ ಯಲ್ಲಿ ಆರಂಭಗೊಂಡಿದೆ. ದೀರ್ಘಾವಧಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಬೋಧಕೇತರ ನೌಕರರನ್ನು ನಿವೃತ್ತ ರಾಗುವ ತಿಂಗಳಾಂತ್ಯಕ್ಕೆ ಇಲಾಖೆ ಕಚೇರಿಗೆ ಕರೆಯಿಸಿ, ಗೌರವಿಸಿ ಅವರನ್ನು ಇಲಾಖೆ ವಾಹನದಲ್ಲಿ ಅಧಿಕಾರಿಗಳೇ ಅವರ ಮನೆಗೆ ಬಿಟ್ಟು ಬರುವ “ಗುರುಭ್ಯೋ ನಮ:’ ಕಾರ್ಯ ಕ್ರಮಕ್ಕೆ ಸೆಪ್ಟಂಬರ್‌ನಿಂದ ಚಾಲನೆ ಸಿಕ್ಕಿದೆ.

Advertisement

ಸ್ವರ್ಣ ಕಾರ್ಕಳ ಅಭಿಯಾನದ ಭಾಗ
ಕಾರ್ಕಳ ನೂರನೇ ವರ್ಷದ ಸಂಭ್ರಮ ದಲ್ಲಿದೆ. ಸ್ವರ್ಣ ಕಾರ್ಕಳದಡಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆಯೂ ಅಮೂಲ್ಯ ಸೇವೆ ಸಲ್ಲಿಸಿದವರನ್ನು ವಿಶಿಷ್ಟವಾಗಿ ಸ್ಮರಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಕ ದಿನದಂದು ಈ ಕಾರ್ಯಕ್ರಮದ ಬಗ್ಗೆ ಶಾಸಕರು ಘೋಷಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. ಸೆಪ್ಟಂಬರ್‌ನಲ್ಲಿ ಮೂವರು ನಿವೃತ್ತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರಂತರ ನಡೆಯಲಿದೆ.

ಸ್ಮರಣೀಯ ಕಾರ್ಯಕ್ರಮ
ಮಾಸಾಂತ್ಯದ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದವರನ್ನು ಪ್ರಮಾಣ ಪತ್ರದೊಂದಿಗೆ ಗೌರವಿಸಲಾಗುತ್ತದೆ. ಶಾಸಕರೂ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಬಳಿಕ ಮನೆಗೆ ಕರೆದೊಯ್ದು ಬಿಡಲಾಗುತ್ತದೆ. ಹೆಚ್ಚು ಮಂದಿ ನಿವೃತ್ತರಾಗುವವರಿದ್ದರೆ ಅಂತಹ ಸಂದರ್ಭ ಇಲಾಖೆಯ ಅನುಷ್ಠಾನ ಅಧಿಕಾರಿ ಅಥವಾ ಇತರ ಅಧಿಕಾರಿಗಳು ಮನೆಗಳಿಗೆ ಬಿಟ್ಟು ಬರುವ ಕಾರ್ಯವನ್ನು ನಡೆಸುತ್ತಾರೆ. ಇದು ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ಸಲ್ಲಿಸಿದವರಿಗೆ ಖುಷಿ ತರುವ ವಿಚಾರ ಎನ್ನುತ್ತಾರೆ ನಿವೃತ್ತ ಶಿಕ್ಷಕರೊಬ್ಬರು.

ಕಾನೂನು ಇಲಾಖೆಯಲ್ಲಿ…
ದೇಶದ ಪ್ರತಿಷ್ಠಿತ ಕಾನೂನು ಇಲಾಖೆಯಲ್ಲೂ ನಿವೃತ್ತರನ್ನು ಮನೆಯವರೆಗೆ ಬಿಟ್ಟು ಗೌರವಯುತವಾಗಿ ಬೀಳ್ಕೊಡುವ ಸಂಪ್ರದಾಯವಿದೆ. ಶಿಕ್ಷಣ ಇಲಾಖೆಯಲ್ಲಿ ಇದೇ ಮೊದಲು.

ಸೀಟು ಬಿಟ್ಟು ಕೊಟ್ಟ ಬಿಇಒ!
ಆ. 31ರಂದು ನಿವೃತ್ತಿ ಹೊಂದಿದ ಶಿಕ್ಷಕ ಸುಬ್ರಹ್ಮಣ್ಯ ಆಚಾರ್ಯ ಅವರನ್ನು ಗೌರವಿಸಿ, ಇಲಾಖೆ ಜೀಪಿನಲ್ಲಿ ಮನೆಗೆ ಕರೆದೊಯ್ದ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾಹನದ ತನ್ನ ಮುಂದಿನ ಆಸನದ ಸೀಟಿನ ಬಾಗಿಲು ತೆರೆದು, ನಿವೃತ್ತ ಶಿಕ್ಷಕರನ್ನು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿ ಅವರನ್ನು ಮನೆಗೆ ಕರೆದೊಯ್ದರು.

Advertisement

ಸೇವೆ ಸ್ಮರಿಸುವುದು ಉದ್ದೇಶ
ಶಿಕ್ಷಣ ಇಲಾಖೆಯಲ್ಲಿ ಆಯಾ ತಿಂಗಳಲ್ಲಿ ನಿವೃತ್ತರಾದವರನ್ನು ಈ ರೀತಿ ವಿನೂತನವಾಗಿ ಸರಳ ರೀತಿಯಲ್ಲಿ ಗೌರವಿಸಲಾಗುತ್ತದೆ. ಸುದೀರ್ಘ‌ ಅವಧಿಯಲ್ಲಿ ಸೇವೆ ಸಲ್ಲಿಸುವವರಿಗೆ ಗೌರವ ಸಲ್ಲಿಸುವುದು ಮತ್ತು ಅವರ ಸೇವೆಯನ್ನು ಸ್ಮರಿಸುವ ವಿಧಾನವಾಗಿದೆ.ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ.
– ಶಶಿಧರ್‌ ಜಿ.ಎಸ್‌., ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ

ಸಾರ್ಥಕ ಸೇವೆ
ಉದ್ಯೋಗಿಗಳನ್ನು ಗೌರವಿಸಿ ಇಲಾಖೆ ವಾಹನದಲ್ಲೇ ಬಿಟ್ಟು ಬರುವ ಈ ಕೆಲಸದಿಂದ ಮನಸ್ಸು ತುಂಬಿ ಬಂದಿದೆ. ಸಾರ್ಥಕ ಸೇವೆ ಎನಿಸಿದೆ. ಇದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ.
-ಸುಬ್ರಹ್ಮಣ್ಯ ಆಚಾರ್ಯ, ನಿವೃತ್ತ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next