Advertisement

ನಟನೆಯಲ್ಲಿ ಎಲ್ಲವೂ ಗೊತ್ತು ಎನ್ನುವ ಭ್ರಮೆ ಬಿಡಿ

02:59 PM Apr 06, 2017 | |

ಧಾರವಾಡ: ಹೊಸ ನಟವರ್ಗ ನಟನೆಯಲ್ಲಿ ತಮಗೆ ಎಲ್ಲವೂ ಗೊತ್ತು ಎನ್ನುವ ಭ್ರಮಾಲೋಕದಲ್ಲಿದ್ದು, ಇದರಿಂದ ಅವರೆಲ್ಲ ಹೊರ ಬರಬೇಕು ಎಂದು ಹಿರಿಯ ರಂಗಕರ್ಮಿ ಚಿದಂಬರರಾವ್‌ ಜಂಬೆ ಹೇಳಿದರು. 

Advertisement

ರಂಗಾಯಣ ವತಿಯಿಂದ ಹಮ್ಮಿಕೊಂಡ ರಂಗಧ್ವನಿ-2017 ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಸುವರ್ಣ ಸಮುತ್ಛಯ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ “ರಂಗಾಭಿನಯ : ಮಾತುಕತೆ, ಮಾಟ, ಮನನ’ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು. 

ನವಯುಗದ ನಟರಿಗೆ ನಾಟ್ಯಶಾಸ್ತ್ರವೇ ಕಷ್ಟದ ಕೆಲಸ. ಈ ನಟರಿಗೆ ನಾಟ್ಯಶಾಸ್ತ್ರವೇ ಬೇಕಿಲ್ಲ. ನಟನೆಯಲ್ಲಿ ಶಿರೋನಾಮೆ(ಕುತ್ತಿಗೆ) ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ತಾವೇ ವಿದ್ವಾಂಸರು ಎಂಬ ಭ್ರಮಾಲೋಕದಲ್ಲಿ ಮುಳಗಿದ್ದಾರೆ. ಈ ಭ್ರಮಾಲೋಕದಲ್ಲಿ ಇರುವ ನಟರಿಗೆ ರಾಷ್ಟ್ರೀಯ ನಾಟಕೋತ್ಸವದ ಸಭೆಗಳು ಕಲ್ಪವೃಕ್ಷಗಳಿದ್ದಂತೆ. 

ಈ ಕಲ್ಪವೃಕ್ಷಗಳಿಗೆ ಮೊರೆ ಹೋದಾಗಲೇ ಬೇಡಿದ ವರ ಪಡೆಯಬಹುದು ಎಂದು ಸಲಹೆ ನೀಡಿದರು. ನಾಟ್ಯಶಾಸ್ತ್ರವೇ ಇಂದಿನ ನಟ-ನಿರ್ದೇಶಕರಿಗೆ ಸವಾಲಾಗಿದೆ. ಪ್ರೇಕ್ಷಕರು ಪ್ರಬುದ್ಧರಾಗಲು ಮೊದಲು ನಟರು ಪ್ರಬುದ್ಧವಾಗಿ ನಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಣ್ಣ-ಸಣ್ಣ ಸೂಕ್ಷ್ಮಗಳನ್ನು ಹಿಡಿದು ಕೆಲಸ ಮಾಡುವ ವ್ಯವಧಾನ, ಸಹನೆ, ಸಂಯಮ, ತಾಳ್ಮೆ ಅತ್ಯಗತ್ಯ.

ಒಂದು ದೃಶ್ಯ ಕ್ರಿಯೆ ಅನುಭವಿಸಿ ನಟಿಸುವ ಕೆಲಸವಾಗಬೇಕಿದೆ ಎಂದರು. ರಂಗನಟರು ತಮ್ಮ ದೇಹದ ಅವಯವಗಳನ್ನು ಕರಾರುವಕ್ಕಾಗಿ ಬಳಸುವಂತಹ ಕಲೆ ಕರಗತ ಮಾಡಿಕೊಳ್ಳಿ. ಮರೆತು ಬಿಟ್ಟಿರುವ ದೃಷ್ಟಿನೋಟದತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಹಿಂದಿನ ಅಭಿನಯ ಪದ್ಧತಿ ನೋಡಿಯೇ ಇಂದಿನ ನಟರು ಕಲೆಯುವುದು ಬಹಳಷ್ಟಿದೆ.

Advertisement

ಅಭಿನಯ ಬೆಳೆಯಲು ಕಲಾತಪಸ್ವಿಗಳಂತೆ ಪರಿಶ್ರಮ ಪಡಬೇಕಿದೆ ಎಂದರು. ಅಭಿನಯ ಎಂಬುದು ಆಧ್ಯಾತ್ಮವಿದ್ದಂತೆ. ಇದನ್ನು ನಿರಂತರ ತಪಸ್ಸಿನ ಮೂಲಕ ಸಿದ್ಧಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ, ಆಧುನಿಕ ನಟರು ಇಂಥ ಮನೋಸ್ಥಿತಿಗೆ ಇಳಿಯುತ್ತಿಲ್ಲ. ಹೀಗಾಗಿ ನಟನೆಯಲ್ಲಿ ಹಾವ-ಭಾವ, ಅವಯವಗಳ ಕೊರತೆ ಎದ್ದು ಕಾಣುತ್ತದೆ ಎಂದರು.

ಕೇವಲ ಕೈ-ಕಾಲು, ಸ್ವಲ್ಪ ಅವಯವಗಳನ್ನು ಬಳಸಿ ಕುಣಿದರೆ ನಟನೆ ಅಲ್ಲ. ಅಗತ್ಯಕ್ಕೆ ತಕ್ಕಷ್ಟು ನಟಿಸುವುದರ ಜತೆಗೆ ಶಿಸ್ತು ರೂಢಿಸಿಕೊಳ್ಳಬೇಕು. ಹಸ್ತಪ್ರಾಣ, ಹಸ್ತಭೇದ, ಹಸ್ತವೃಕ್ಷಗಳು, ಕೃತಿಬೋಧ, ಮುದ್ರಾಭಾಷೆ ಅರಿತಿರಬೇಕು. ಮುಖ್ಯವಾಗಿ ನಟರಿಗೆ ಒಂದು ನಿಲುವು ಇರಬೇಕು.

ಇದನ್ನು ಗಮನಿಸಿ ರಂಗಭೂಮಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು. ರಂಗ ಸಮಾಜದ ಸದಸ್ಯ ಡಾ|ಡಿ.ಎಸ್‌.ಚೌಗಲೆ ಮಾತನಾಡಿ, ನಟರು ಅಭಿನಯ ಮುಖ್ಯವಾಗಿರಿಸಿ ಮುಂಚೂಣಿಗೆ ಬರಬೇಕು. ನಿರ್ದೇಶಕ-ನಟರ ನಡುವಿನ ಮಾತಿನ ಲಹರಿಯೇ ಮಾಟ. ವಾಸ್ತವದ ನೆಲೆಯಲ್ಲಿ ಅಭಿನಯ ಹೇಳುವ ಕೆಲಸ ನಟರಿಂದ ಆಗಬೇಕಿದೆ. 

ಸಮಕಾಲಿನ ಸಮಸ್ಯೆಗಳು ಇರಿಸಿಕೊಂಡು ನಾಟಕ ರಚಿಸುವಂತಹ ಕೆಲಸವೂ ಆಗಬೇಕಿದೆ ಎಂದರು. ಹಿರಿಯ ನಟಿ ಲಕೀಬಾಯಿ ಏಣಗಿ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ ಉದ್ಘಾಟಿಸಿದರು. ಧಾರವಾಡ ರಂಗಾಯಣ ನಿರ್ದೇಶಕ ಡಾ|ಪ್ರಕಾಶ ಗರುಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗಾಯಣ ಆಡಳಿತಾಧಿಧಿಕಾರಿ ಬಸವರಾಜ ಹೂಗಾರ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next