ಶಿಗ್ಗಾವಿ: ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ಆತಂಕ, ಭಯ ಬೇಡ. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನ ರಕ್ಷಕ ಮಾಸ್ಕ್ಅನ್ನು ಕಡ್ಡಾಯ ಬಳಸಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಪಟ್ಟಣದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ವೈರಸ್ ತಡೆಗಟ್ಟುವಲ್ಲಿ ಸಾರ್ವಜನಿಕರು ಜಾಗೃತಿ ಹೆಚ್ಚಿಸಿಕೊಳ್ಳಲಿ. ತುರ್ತು ಆರೋಗ್ಯ ಸಮಸ್ಯೆಯಾದರೆ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಹಾಯ, ಸಹಕಾರ ನೀಡುತ್ತಿದ್ದು, ಸೀಲ್‌ಡೌನ್ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಪಿಪಿ ಕಿಟ್, ಸ್ಯಾನಿಟೈಜರ್‌ಅನ್ನು ವಿತರಿಸಿದೆ. ಸೀಲ್‌ಡೌನ್ ಪ್ರದೇಶದ ಜನರಿಗೆ 10 ಸಾವಿರ ಮಾಸ್ಕ್ ವಿತರಿಸುವಂತೆ ಸಲಹೆ ನೀಡಿದರು. ಕಂಟೆನ್ಮೆಂಟ್ ಜೋನ್‌ಗಳಲ್ಲಿ ಜನರಿಗೆ ಹಾಲಿನ ಅವಶ್ಯಕತೆಯಿದ್ದು ವಿತರಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ತುರ್ತುಸಂದರ್ಭದಲ್ಲಿ ಬಳಸಲು ಆಂಬ್ಯುಲೆನ್ಸ್ ಕೊರತೆ ಇದ್ದು, ಆದಷ್ಟು ಬೇಗ ಪೂರೈಸುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಮುಂಬೈ ಭಾಗದಿಂದ ವಲಸೆ ಬಂದವರ ಸಂಪರ್ಕದಿಂದ 56 ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 14 ಜನ ಗುಣಮುಖರಾಗಿದ್ದಾರೆ. ರೋಗನಿರೋಧಕ ಮಾತ್ರೆಗಳನ್ನೂ ನೀಡಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಎ.ಸಿ. ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್ ಪ್ರಕಾಶ ಕುದುರಿ, ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.