Advertisement

ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯ ಬಿಡಿ

01:21 PM Feb 18, 2017 | Team Udayavani |

ದಾವಣಗೆರೆ: ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬ ಜನರ ಆಸೆ, ನಿರೀಕ್ಷೆ, ಕನಸು ನನಸಾಗಿಸುವ ನಿಟ್ಟಿನಲ್ಲಿ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಬೇಕು ಎಂದು ಜೆಡಿಎಸ್‌ ಕೋರ್‌ ಕಮಿಟಿ ಸಮಿತಿ ಸದಸ್ಯ, ಸೊರಬ ಶಾಸಕ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ. 

Advertisement

ಶುಕ್ರವಾರ ಚೇತನಾ ಹೋಟೆಲ್‌ ಸಭಾಂಗಣದಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಉತ್ತಮ ಆಡಳಿತ ನಡಸಿದ್ದರು. ಬಿಜೆಪಿ, ಕಾಂಗ್ರೆಸ್‌ ಆಡಳಿತದಿಂದ ಬೇಸತ್ತಿರುವ ಜನರು, ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದಾರೆ.

ಆಸೆ, ನಿರೀಕ್ಷೆ ಇದ್ದ ಮಾತ್ರಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ. ಇರುವಂಥಹ ಚಿಕ್ಕ ಪುಟ್ಟ ವೈಮನಸ್ಸು ಬಿಟ್ಟು ಎಲ್ಲರೂ ಒಂದಾಗಿ ತಳ ಮಟ್ಟದಿಂದ ಪಕ್ಷವನ್ನು  ಕಟ್ಟಿ, ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಇವೆ ಎಂಬುದು ಗಮನಕ್ಕೆ ಬಂದಿದೆ. ಜಿಲ್ಲಾ ಅಧ್ಯಕ್ಷರು ಎಲ್ಲವನ್ನೂ ಬಗೆಹರಿಸಿ, ಜಿಲ್ಲಾ, ತಾಲೂಕು ಸಮಿತಿ ರಚಿಸಿ, ಕೋರ್‌ ಕಮಿಟಿಗೆ ವರದಿ ನೀಡಬೇಕು.

ಎಲ್ಲಾ ಕ್ಷೇತ್ರಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿ, ಪಕ್ಷ ಸಂಘಟಿಸಬೇಕಿದೆ ಎಂದು ತಿಳಿಸಿದರು. ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿರುವ ಜನರು, ಈಗ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ ಎಂಬ ಕಾರಣಕ್ಕೆ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ. ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಜನರ ಮನದಲ್ಲಿರುವ ಆಸೆ ಕಾರ್ಯಗತವಾಗಲು ಶಕ್ತಿ ಮೀರಿ ಕೆಲಸ ಮಾಡಬೇಕು.

ಮತ್ತೆ ಇಂತಹ ಅವಕಾಶ ದೊರೆಯದು. ಚುನಾವಣೆಯಲ್ಲಿ ಸೋತಲ್ಲಿ 6 ವರ್ಷ ಕಾಲ ಸುಮ್ಮನಿರಬೇಕಾಗುತ್ತದೆ. ಹಾಗಾಗಿ ಈ ಕ್ಷಣದಿಂದಲೇ ಪಕ್ಷದ ಘಟನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು. ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಗೊಂದಲವೇ ಇಲ್ಲ. ಪಕ್ಷ ಮುಗಿಸುವ ಸಂಚು ಮಾಡುವವರಿಗೆ ಅವಕಾಶವೇ ಇಲ್ಲ. ಬೂತ್‌ ಮಟ್ಟದಿಂದ ಪಕ್ಷ ಕಟ್ಟುವಂತಹವರಿಗೆ ಸದಾ ಸ್ವಾಗತ ಇದೆ.

Advertisement

ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ತೋರಿಸುವುದಕ್ಕಾಗಿ ಜಿಲ್ಲಾ ಸಮಾವೇಶಕ್ಕಾಗಿ ಕೋರ್‌ ಕಮಿಟಿಯವರು ಅವಕಾಶ ನೀಡಬೇಕು. ಪಕ್ಷದ ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ಅವರು ಮಾ. 15 ರಿಂದ 20ರ ಒಳಗೆ ಸಮಾವೇಶ ನಡೆಸಿ, 120 ಅಭ್ಯರ್ಥಿಗಳ ಘೋಷಿಸಲಾಗುವುದು ಎಂದು ಹೇಳಿದ್ದಾರೆ. ದಾವಣಗೆರೆ ಇಲ್ಲವೇ ಹರಿಹರದಲ್ಲೇ ಆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದಲ್ಲಿ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಲಾಗುವುದು. 

ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 3 ಕ್ಷೇತ್ರದಲ್ಲಿ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಂತಂತೋ ಭಾಗ್ಯಗಳ ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಸಾಲ ಮನ್ನಾ ಮಾಡುವ ಮೂಲಕ ರೈತರ ಪುನಶ್ಚೇತನ ಭಾಗ್ಯ ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.  

ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ  ಬಿ.ಎಂ. ಫಾರೂಖ್‌ ಮಾತನಾಡಿ, 100 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಗೆ ನಂಜನಗೂಡು ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳೇ ಸಿಗದೇ ಇದ್ದ ಕಾರಣಕ್ಕೆ ಜೆಡಿಎಸ್‌ ನಲ್ಲಿದ್ದ ಕಳಲೆ ಕೇಶವಮೂರ್ತಿ ಅವರಿಗೆ ಆಸೆ, ಆಮಿಷ ತೋರಿಸಿ, ಪಕ್ಷಕ್ಕೆ ಸೇರಿಸಿಕೊಂಡಿದೆ. ಬಿಜೆಪಿಗೂ ಅವರದ್ದೇ ಪಕ್ಷದ ಅಭ್ಯರ್ಥಿಗಳಿಲ್ಲ. ಕಾಂಗ್ರೆಸ್‌ ಅಲ್ಪಸಂಖ್ಯಾತರ ಮತ ಮಾತ್ರ ಬೇಕು. ಅಭಿವೃದ್ಧಿ ಬೇಡ ಎಂದು ದೂರಿದರು.

ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿದರು. ಸೈಯದ್‌ ರೋಷನ್‌ಸಾಬ್‌, ಯುವ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌, ಮುಖಂಡ ಕೆ.ಬಿ.ಕಲ್ಲೇರುದ್ರೇಶ್‌, ಶೀಲಾಕುಮಾರಿ ಇತರರು ಇದ್ದರು. ಆರ್‌. ಸಂಗನಗೌಡ್ರು ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next