Advertisement

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

05:12 PM May 01, 2024 | Team Udayavani |

ಬಸ್ರೂರು: ಗುಲ್ವಾಡಿಯಲ್ಲೊಂದು ರಸ್ತೆಯ ಪಕ್ಕದಲೇ ಗುಜಿರಿ ಅಂಗಡಿಯೊಂದಿದೆ. ಅಲ್ಲಿ ನೂರಾರು ಹಳೆಯದಾದ ಟಿ.ವಿ. ಸೆಟ್‌ಗಳ ಮಧ್ಯೆ ಒಂದು ಪುಟ್ಟ ಕಪಾಟು ಇದೆ. ಅದಕ್ಕೊಂದು ಮಾಡನ್ನು ಸಹ ಮಾಡಲಾಗಿದೆ. ಆ ಕಪಾಟಿನ ಬಾಗಿಲು ತೆರೆದರೆ ಕನ್ನಡ ಸಾರಸ್ವತ ಲೋಕದ ಸಾಹಿತಿಗಳು ಅನೇಕರು ಬರೆದಿರುವ ಪುಸ್ತಕಗಳ ರಾಶಿಯೇ ಕಾಣುತ್ತದೆ. ಇದರ ಹೆಸರು ಉಚಿತ ಪುಟಾಣಿ ಗ್ರಂಥಾಲಯ. ಇದನ್ನು ಸ್ಥಾಪಿಸಿದವರು ಯಾಕೂಬ್‌ ಖಾದರ್‌ ಗುಲ್ವಾಡಿ.

Advertisement

ಈ ಪುಟ್ಟ ಗ್ರಂಥಾಲಯದಲ್ಲಿ ಹಿರಿಯ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌, ರವಿ ಬೆಳಗೆರೆ, ಸಂತೋಷ್‌ ಕುಮಾರ್‌
ಗುಲ್ವಾಡಿ, ನಾಗತಿಹಳ್ಳಿ ಚಂದ್ರಶೇಖರ್‌, ಜಯಂತ ಕಾಯ್ಕಿಣಿ ಮೊದಲಾದವರು ಪ್ರಕಟಿಸಿದ ಪುಸ್ತಕಗಳಿವೆ. ಅಮೆರಿಕ, ಇಂಗ್ಲೆಂಡ್‌ ದೇಶಗಳಲ್ಲಿನ ಪಾರ್ಕ್‌ಗಳಲ್ಲಿ ಸಣ್ಣ ಕವಾಟಿನಲ್ಲಿ ಪುಸ್ತಕಗಳನ್ನು ಓದಲು ಇಡುವುದನ್ನು ಇವರು ನೋಡಿದ್ದು, ಅದುವೇ ಈ ಗ್ರಂಥಾಲಯಕ್ಕೆ ಪ್ರೇರಣೆಯಾಗಿದೆ.

ತರಂಗ ವಾರಪತ್ರಿಕೆ ಪ್ರೇರಣೆ
ಯಾಕೂಬ್‌ ಖಾದರ್‌ ಕಲಿತಿದ್ದು ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ. ಸಾಹಿತ್ಯದ ಆಸಕ್ತಿ ಬೆಳೆದಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ. 34 ವರ್ಷಗಳ ಹಿಂದೆ ಯಾಕೂಬ್‌ ತಲ್ಲೂರಿನ ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಪುಸ್ತಕಗಳ ರಾಶಿಯಲ್ಲಿ ತರಂಗ ವಾರ ಪತ್ರಿಕೆಯೂ ಇತ್ತು. ಇದನ್ನು ಕುತೂಹಲದಿಂದ ತೆಗೆದ ಯಾಕೂಬ್‌ ಓದಲು ಆರಂಭಿಸಿದಾಗ ಅದರಲ್ಲಿನ
ಸಂತೋಷ್‌ ಕುಮಾರ್‌ ಗುಲ್ವಾಡಿಯವರ ಬರಹ ಆಕರ್ಷಿಸಿತ್ತು. ನಮ್ಮ ಗುಲ್ವಾಡಿಯವರೇ ಆದ ಸಂತೋಷ್‌ ಕುಮಾರ್‌ ಅವರಂತೆಯೇ ನಾನೂ ಯಾಕೆ ಸಾಹಿತ್ಯ ಆರಂಭಿಸಬಾರದು ಎಂಬ ಪ್ರಶ್ನೆಯಿಂದ ಯಾಕೂಬ್‌ಗೆ ಸಾಹಿತ್ಯದ ಅಭಿರುಚಿ ಆರಂಭವಾಯಿತು.

ಗುಲ್ವಾಡಿ ಟಾಕೀಸ್‌ ಬ್ಯಾನರ್‌ ಅಡಿ ಈಗಾಗಲೇ ಅನೇಕ ಚಲನಚಿತ್ರ ಮಾಡಿರುವ ಯಾಕೂಬ್‌ ಖಾದರ್‌ ಗುಲ್ವಾಡಿ ಅವರಿಗೆ ರಿಸರ್ವೇಶನ್‌ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಸಿನೆಮಾ ಕ್ಷೇತ್ರಕ್ಕಾಗಿ ಈಗಾಗಲೇ 17ಕ್ಕೂ ಹೆಚ್ಚು ದೇಶಗಳಿಗೆ 40ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ ಅನುಭವ ಯಾಕೂಬ್‌ ಅವರದು.

Advertisement

ಪುಟಾಣಿ ವಾಚನಾಲಯ!
ಹಳೆ ಕಾಲದ ನೇಗಿಲು, ನೊಗ ಮತ್ತಿತರ ಅನೇಕ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿರುವ ಯಾಕೂಬ್‌ ಅವರ ಸಂಗ್ರಹಾಲಯವನ್ನು
ಕೋಟೇಶ್ವರದ ಯುವ ಮೆರಿಡಿಯನ್‌ನಲ್ಲಿ ನಾವು ನೋಡಬಹುದಾಗಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾ ಬಾಯಿ ಬರೆದ ಗುಲ್ವಾಡಿ ವೆಂಕಟರಾವ್‌, ಸಂತೋಷ್‌ ಕುಮಾರ್‌ ಗುಲ್ವಾಡಿ ಅವರ ಹೆಸರಿನಲ್ಲಿ ಪ್ರತೀ ವರ್ಷ ಯಾಕೂಬ್‌ ಖಾದರ್‌ ಪ್ರಶಸ್ತಿ ನೀಡುತ್ತಿದ್ದಾರೆ ಎನ್ನುವುದು ಗಮನಾರ್ಹ. ಈಗಾಗಲೇ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಿಸರ್ವೇಶನ್‌ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಇವುಗಳಲ್ಲಿ ಪ್ರಮುಖ. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಇವರು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿರುವ ಇವರು ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಸದಸ್ಯರಾಗಿಕಾರ್ಯನಿರ್ವಹಿಸುತ್ತಿದ್ದಾರೆ.

ಸಾಹಿತ್ಯಾಸಕ್ತಿ ಬೆಳೆಸುವ ಆಶಯ
ಬೇರೆ ಬೇರೆ ದೇಶ ಸುತ್ತಿದ ನನಗೆ ಇದೊಂದು ಕಲ್ಪನೆ ಹುಟ್ಟಿದ್ದು ಈಗ ಸಾಕಾರಗೊಳಿಸಿದ್ದೇನೆ. ನಮ್ಮ ಸುತ್ತಲಿನ ಜನರು ಇನ್ನಷ್ಟು ಸಾಹಿತ್ಯದ ಕಡೆಗೆ ಒಲವು ತೋರಬೇಕಿದೆ. ಅದರಲ್ಲೂ ಮುಖ್ಯವಾಗಿ ಇಂದಿನ ಯುವಜನರು ಸಾಹಿತ್ಯ ಪ್ರೇಮವನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಸುತ್ತ ಹತ್ತಾರು ಉತ್ತಮ ಪುಸ್ತಕಗಳಿದ್ದರೂ ನಾವು ಅದರ ಕಡೆಗೆ ಗಮನಕೊಡುತ್ತಿಲ್ಲ. ದಾರಿಯಲ್ಲೇ ಪುಸ್ತಕ ಸಿಗುವ ಈ ವಿಧಾನದಿಂದಾದರೂ ಜನ ಪುಸ್ತಕ ಓದುವಂತಾಗಲಿ ಎನ್ನುವುದು ನನ್ನ ಆಶಯ. ಮುಂದಿನ ದಿನಗಳಲ್ಲಿ ತಿಂಗಳ ಕೊನೆಯಲ್ಲಿ ಒಂದಷ್ಟು ಸಾಹಿತ್ಯಾಸಕ್ತರು ಇಲ್ಲಿ ಕುಳಿತು ಒಂದೊಂದು ಪುಸ್ತಕದ ಬಗ್ಗೆ ಚರ್ಚಿಸಬೇಕೆಂಬುದು ನನ್ನ ಹಂಬಲವಾಗಿದೆ. ಮರದ ಕೆಳಗೆ ನಾಲ್ಕಾರು ಕುರ್ಚಿಗಳನ್ನಿಡುವ ವ್ಯವಸ್ಥೆ ಮಾಡುತ್ತಿದ್ದೇನೆ.
*ಯಾಕೂಬ್‌ ಖಾದರ್‌ ಗುಲ್ವಾಡಿ

*ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next