Advertisement
ನಂದೇನರ ಮಿಸ್ಟೇಕ್ ಆಗೈತನ ಅಂತ ಯೋಚನೆ ಮಾಡ ಕೋಂತನ ಮಲಗಿದೆ. ಕಾರಣ ಗೊತ್ತಿಲ್ಲದ ಏನರ ಆದ್ರ ಭಾಳ ಭಾಳ ವಿಚಾರ ತಲ್ಯಾಗ ಕೊರ್ಯಾಕ ಶುರು ಮಾಡಿ ಬಿಡ್ತಾವು.
Related Articles
Advertisement
ಅದ್ರಾಗ ಇತ್ತೀಚಿನ ದಿನದಾಗ ಧರ್ಮದ ವಿಚಾರದಾಗ ಸಿಕ್ಕಾಪಟ್ಟಿ ಗದ್ಲ ನಡ್ಯಾಕತ್ತಿರುವಾಗ ವಕ್ಫ್ ಬೋರ್ಡ್ ಅಧ್ಯಕ್ಷರ ಆಲೋಚನೆ ಸರಿಯಲ್ಲ ಅಂತ ಅನಸ್ತೈತಿ. ಯಾಕಂದ್ರ ಸಾಲಿ ಕಾಲೇಜಿನ್ಯಾಗ ಬಹುತೇಕರು ಧರ್ಮಾ, ಜಾತಿ ನೋಡಿ ಫ್ರೆಂಡ್ಸ್ ಶಿಪ್ ಮಾಡೂದಿಲ್ಲ. ಅವರ ಹೆಸರ ಮ್ಯಾಲ ಧರ್ಮ ಯಾದ ಅಂತ ಗೊತ್ತಾಗಬೌದು, ಆದ್ರ ಆ ಟೈಮಿನ್ಯಾಗ ಧರ್ಮಾ ಜಾತಿ ಬಗ್ಗೆ ಯಾರೂ ಭಾಳ ತಲಿ ಕೆಡಿಸಿಕೊಳ್ಳುದಿಲ್ಲ. ಹಂಗಿದ್ದಾಗ ಅವರಿಗೆ ಪ್ರತ್ಯೇಕ ಸಾಲಿ ಕಾಲೇಜು ಮಾಡಿ ಅವರ ಮನಸಿನ್ಯಾಗ ಸಮಾಜದ ಸೌಹಾರ್ದತೆಗಿಂತ ಅವರ ಧರ್ಮಾನ ಮುಖ್ಯ ಅನ್ನುವಂತಾ ಭಾವನೆ ಮೂಡೂÕದು ಸರಿಯಲ್ಲ ಅಂತ ಅನಸ್ತೈತಿ.
ನಾವು ಕಾಲೇಜ್ ಕಲಿಯುವಾಗ ಮಂಗ್ಯಾ ಹುಡುಗೂರು ಎದುರಿಗಿ ಬಂದ್ರ ಹುಡುಗ್ಯಾರು ತಲಿ ಕೆಳಗ ಹಾಕೊಂಡು ಸೈಡಿಗಿ ಹಾದು ಹೊಕ್ಕಿದ್ರು, ಈಗ ಕಾಲ ಬದಲಾಗೈತಿ ಎದುರಿಗಿ ಹುಡುಗ್ಯಾರ ಬರಾಕತ್ತಿದ್ರಂದ್ರ ನಮಗ್ಯಾಕ್ ಬೇಕೊ ಮಾರಾಯಾ ಅಂತ ತಾವ ಸೈಡ್ ಸರದು ನಿಲ್ಲುವಂಗ ಆಗೈತಿ. ಅಂದ್ರ ಹುಡುಗ್ಯಾರು ಅವರ ಬಗ್ಗೆ ಅವರ ಕಾನ್ಫಿಡೆಂಟ್ ಆಗಾಕತ್ತಾರು, ಅಪ್ಪಾ ಅವ್ವಾನು ಮಗಳು ಅಗ್ರೆಸ್ಸಿವ್ ಆಗೊದ್ನ ನೋಡಿ ಖುಷಿ ಪಡ್ತಾರು ಬಿಟ್ರ ಮೊದಲಿನಂಗ, ನೀ ಹೆಣ್ ಹುಡುಗಿ ಅದಿ ಅದ್ನ ಮಾಡಬ್ಯಾಡ ಇದ್ನ ಮಾಡಬ್ಯಾಡ ಅನ್ನೂದಿಲ್ಲ. ಅದ್ಕ ಹೆಣ್ಮಕ್ಕಳು ಎಲ್ಲಾ ರಂಗದಾಗೂ ಯಾವುದು ಮೀಸಲಾತಿ ಕೇಳದನ ಅವರ ಸ್ವಂತ ಎಫರ್ಟ್ ಮ್ಯಾಲ ಸಾಧನೆ ಮಾಡಾಕತ್ತಾರು.
ಹುಡುಗ್ಯಾರೂ ಹುಡುಗೂರು ಜೋಡಿ, ಜಾತಿ ಧರ್ಮದ ಯೋಚನೆ ಮಾಡದನ ಕಲ್ಯಾಕ ಏನ್ ಬೇಕೊ ಅದ್ಕ ಸಪೋರ್ಟ್ ಮಾಡಿ, ಅವರು ಬಯಸಿದ್ ಸಾಧನೆ ಮಾಡಾಕ್ ಅವಕಾಶ ಕೊಟ್ರ ಅವರು ಮೀಸಲಾತಿ ಬಿಟ್ಟು ಸಾಮರ್ಥ್ಹದ ಮ್ಯಾಲ ಅವಕಾಶ ಕೊಡ್ರಿ ಅಂತ ಕೇಳ್ತಾರು.
ಹುಡುಗ್ಯಾರಿಗಿ ಧರ್ಮದ ಹೆಸರ ಮ್ಯಾಲ್ ಮತ್ಯಾವದೋ ಕಾರಣಕ್ಕ ಪ್ರತ್ಯೇಕ ಸಾಲಿ ಮಾಡೂದ್ರಿಂದ ಸಮಾಜದಾಗಷ್ಟ ಅಲ್ಲ ಅದರ ಪರಿಣಾಮ ಮನ್ಯಾಗೂ ಆಗೂ ಚಾನ್ಸಸ್ ಅದಾವು. ಸಾಲಿ ಕಲಿವಾಗ್ಲೆನ ಹುಡುಗೂರು ಜೋಡಿ ಇದ್ರಂದ್ರ ಅವರ ಅವರ ಬಗ್ಗೆ ತಿಳಕೊಳ್ಳಾಕ ಅನುಕೂಲ ಅಕ್ಕೇತಿ. ಅದು ಮುಂದ ಮದುವಿ ಆಗುವಾಗ, ಸಂಸಾರ ಮಾಡೂವಾಗ ಎಲ್ಲಾದ್ರೂ ಅನುಕೂಲ ಅಕ್ಕೇತಿ. ಇಲ್ಲಾಂದ್ರ ಗಂಡ್ಮಕ್ಕಳ ಬಗ್ಗೆ ಬರೆ ನೆಗೆಟಿವ್ ಆಲೊಚನೆ ಬೆಳಸ್ಕೊಂಡು ಮದುವಿ ಆದಮ್ಯಾಲೂ ಅಲ್ಲೂ ಸಪರೇಟ್ ಸಾಲಿ ಕಲತಂಗ, ನಿನ್ ರೂಮ್ ಆದು, ನನ್ ರೂಮ್ ಇದು ಅಂತ ಅಲ್ಲೂ ಸಪರೇಟ್ ಆದ್ರ ದೇಶಧ ಭವಿಷ್ಯದ ಕತಿ ಏನು?
ಸಂಸಾರ ಅಂದ್ರ ಗಂಡಾ ಹೆಂಡ್ತಿ ನಡಕ ಕಾಂಪಿಟೇಶನ್ ಅಲ್ಲಾ. ಇಬ್ಬರ ನಡಕಿನ ಕೊ ಆಪರೇಷನ್. ಅದ್ನ ಅರ್ಥಾ ಮಾಡ್ಕೊಂಡು ಜೀವನಾ ಮಾಡೊ ಮನಸ್ಥಿತಿ ಬೆಳಿಯುವಂಗ ನೋಡ್ಕೊಬೇಕು. ಇಲ್ಲಾಂದ್ರ ಸಾಲಿ ಅಷ್ಟ ಪ್ರತ್ಯೇಕ ಕಲಿಯುವುದರ ಜೋಡಿ ಜೀವನಾನೂ ಸಪರೇಟ ಮಾಡಾಕ ಶುರು ಮಾಡಿದ್ರಂದ್ರ ನಮ್ ಕೌಟುಂಬಿಕ ವ್ಯವಸ್ಥೆ ಮ್ಯಾಲ್ ದೊಡ್ಡ ಪರಿಣಾಮ ಬೀರತೈತಿ.
ಮಕ್ಕಳೊಳಗ ಸಣ್ಣಾರಿದ್ದಾಗನ ಹೊಂದಾಣಿಕಿ ಜೀವನಾ ಕಲಿಸಿದ್ರ ಕೂಡಿ ಬಾಳ್ಳೋದು ಕಲಿತಾರು ಇಲ್ಲಾಂದ್ರ ಅವರೂ ರಾಜಕಾರಣಿಗೊಳಂಗ ಟೊಪಗಿಗೊಂದು ಧರ್ಮಾ, ಶಾಲಿಗೊಂದು ಧರ್ಮ ಅನ್ನಾರ ಮಾತು ಕೇಳಿ ಅವರೂ ಅದ್ನ ಫಾಲೊ ಮಾಡಾಕ್ ಶುರು ಮಾಡ್ತಾರು.
ಸಾಮಾನ್ಯ ಜನರು ಬಹುತೇಕ ಇದೆಲ್ಲಾ ಮೀರಿ ತಮಗ ಯಾರ್ ಚೊಲೊ ಕೆಲಸಾ ಮಾಡ್ತಾರು ಅಂತ ಅನಸ್ತೈತಿ ಅವರ್ನ ಗುರುತಿಸ್ತಾರು ಅಂತ ಕಾಣತೈತಿ. ಯಾಕಂದ್ರ ದೇಶದಾಗ ಇತ್ತೀಚೆಗೆ ನಡೆದ ಎಲೆಕ್ಷ್ಯನ್ಯಾಗ ಒಂದೊಂದು ರಾಜ್ಯದಾಗ ಒಂದೊಂದು ಪಾರ್ಟಿ ಗೆಲ್ಲಿಸ್ಯಾರು, ಅದ್ನ ನೋಡಿದ್ರ ಜನರಿಗೆ ಪಾರ್ಟಿ ಮುಖ್ಯ ಅಂತ ಅಂದ್ಕೊಂಡಿಲ್ಲ ಅಂತ ಕಾಣತೈತಿ.
ಯಾರ್ ಎಲ್ಲಾರ್ನೂ ಸೇರಿಸಿಕೊಂಡು ಜನರ ಅಭಿವೃದ್ದಿ ಮಾಡ್ತಾರು ಅಂತ ಅನಸ್ತೈತಿ ಅವರಿಗೆ ಅವಕಾಶಾ ಕೊಡ್ತಾರು ಅಂತ ಕಾಣಸ್ತೈತಿ. ಅದ್ಕ ಬೊಮ್ಮಾಯಿ ಸಾಹೇಬ್ರುನು ಧರ್ಮದ ಆಧಾರದ ಮ್ಯಾಲ ಸಾಲಿಗಿ ಅವಕಾಶ ಕೊಡದನ ಎಲ್ಲಾನ್ರೂ ಸೇರಿಸಿಕೊಂಡು ಅಭಿವೃದ್ದಿ ಯಾತ್ರೆ ನಡಸ್ಯಾರು. ನಾವು ಹಂಗ ಯಜಮನ್ತಿ ನಿರ್ಧಾರಕ ಕಾರಣ ತಿಳಕೊಂಡು ಚಾಪಿ ಮಡಚಿ ಮೂಲ್ಯಾಗಿಟ್ಟು ಸಮಬಾಳು ಸಮಪಾಲು ಅಂತ ಒಳಗ ಬಂದು ಮಲಕೊಂಡೆ.
ಶಂಕರ ಪಾಗೋಜಿ