ಬೆಂಗಳೂರು: ಪ್ರದರ್ಶನ ಕಲೆಗೆ ಜನಪದ ಸ್ಪರ್ಶ ನೀಡಲು ಮುಂದಾಗಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಎರಡು ವರ್ಷಗಳ ಪ್ರದರ್ಶನ ಕಲೆಯ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪ್ರದರ್ಶನ ಕಲೆ ವಿಭಾಗದ ಪಠ್ಯಕ್ರಮ, ಸೌಲಭ್ಯ ಮತ್ತು ಬೋಧನಾ ವಿಧಾನಗಳ ಅಧ್ಯಯನಕ್ಕೂ ಜಾನಪದ ವಿ.ವಿ.ನಿರ್ಧರಿಸಿದೆ.
ಸಂಗೀತ, ನಾಟಕ ಮತ್ತು ನೃತ್ಯಕ್ಕೆ ಹೊಸ ದೃಷ್ಟಿ ಹಾಗೂ ಗುರಿಯನ್ನು ಈ ವಿಭಾಗದ ಮೂಲಕ ನೀಡಲಾಗುತ್ತದೆ. ಸಂಗೀತ, ನೃತ್ಯ ಹಾಗೂ ನಾಟಕ ವಿಭಾಗದಲ್ಲಿ ಹೊಸ ಕಲಾವಿದರ ಸೃಷ್ಟಿಯ ಜತೆಗೆ, ಅಭಿನಯಕಾರರನ್ನು ಸಮಾಜಕ್ಕೆ ನೀಡುವ ಬಹುದೊಡ್ಡ ಕಾರ್ಯವನ್ನು ಪ್ರದರ್ಶನ ಕಲಾ ವಿಭಾಗ ಮಾಡುತ್ತಿದೆ. ಪದವಿಯ ನಂತರ ನೀಡುವ ಕೋರ್ಸ್ ಇದಾಗಿರುವುದರಿಂದ ವಿದ್ಯಾರ್ಹತೆ, ಪ್ರವೇಶ ಪ್ರಕ್ರಿಯೆ, ಪರೀಕ್ಷಾ ವಿಧಾನ…ಎಲ್ಲವನ್ನೂ ಬೆಂಗಳೂರು ವಿವಿಯಂತೆ ಅನುಷ್ಠಾನ ಮಾಡಲು ಚಿಂತನೆ ನಡೆಯುತ್ತಿದೆ.
ಯುವ ಪದವೀಧರರಿಗೆ ಪ್ರದರ್ಶನ ಕಲೆಯ ಮೂಲಕ ಜಾನಪದ ಸ್ಪರ್ಶ ನೀಡಲು ಜಾನಪದ ವಿ.ವಿ., 2020-21ನೇ ಶೈಕ್ಷಣಿಕ ವರ್ಷದಿಂದ ಪ್ರದರ್ಶನ ಕಲಾ ಕೋರ್ಸ್ ಆರಂಭಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ ಎಂದು ವಿ.ವಿ.ಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರದರ್ಶನ ಕಲಾ ವಿಭಾಗವು ಪೂರ್ಣ ಪ್ರಮಾಣದ ಸ್ನಾತಕೋತ್ತರ ಪದವಿಯ ಕೇಂದ್ರವಾಗಿರಲಿದ್ದು,
ನೃತ್ಯ, ನಾಟಕ ಮತ್ತು ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತದೆ. ಇದೇ ಸ್ನಾತಕೋತ್ತರ ಪದವಿಯ ಆಧಾರದ ಮೇಲೆ ಸಂಶೋಧನೆ ಮಾಡಲು ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ. ಪ್ರದರ್ಶನ ಕಲೆಯಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ಇರುತ್ತದೆ ಮತ್ತು ಅದಕ್ಕೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಿಕೊಳ್ಳಲು ವಿ.ವಿ.ಸಿದ್ದತೆ ನಡೆಸುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಠ್ಯಕ್ರಮ ತಯಾರಿ: ಪ್ರದರ್ಶನ ಕಲಾ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳಿಗೆ ನಾಲ್ಕು ಸೆಮಿಸ್ಟರ್‌ಗಳಲ್ಲಿ ಬೋಧನಾ ವಿಧಾನ ಇರುತ್ತದೆ. ಇಲ್ಲಿ ಪ್ರಾಯೋಗಿಕ ಕಲಿಕೆಗೆ ಆದ್ಯತೆ ಹೆಚ್ಚಿರುವುದರಿಂದ ಅದಕ್ಕೆ ಪೂರಕವಾಗುವಂತೆ ಪಠ್ಯಕ್ರಮವನ್ನು ತಯಾರಿಸುವ ಕಾರ್ಯವೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ. ಕೋರ್ಸ್‌ನ ಮಾನ್ಯತೆ ಮತ್ತು ಜಾನಪದದೊಂದಿಗೆ ಪ್ರದರ್ಶನ ಕಲೆಯನ್ನು ಯಾವ ರೀತಿ ಬೆರೆಸಬಹುದು ಎಂಬುದನ್ನು ಪರಿಶೀಲಿಸುವ ಕಾರ್ಯವೂ ನಡೆಯುತ್ತದೆ.
ಜನಪದ ನಾಟಕಕ್ಕೆ ಆದ್ಯತೆ: ಜಾನಪದ ವಿ.ವಿ.ಯಲ್ಲಿ ಆರಂಭಿಸಲಿರುವ ಪ್ರದರ್ಶನ ಕಲೆ ವಿಭಾಗದಲ್ಲಿ ಜನಪದ ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರದರ್ಶನ ಕಲೆಯ ಪಠ್ಯಕ್ರಮಕ್ಕೆ ಎರಡು ಅಥವಾ ಮೂರು ವಿಷಯವನ್ನು ಸೇರಿಸಲಾಗುತ್ತದೆ. ಜನಪದ ನಾಟಕವನ್ನು ಯುವ ಜನತೆಗೆ ತಿಳಿಸಲು ಪೂರಕವಾಗುವಂತೆ ಬೋಧಿಸಲಾಗುತ್ತದೆ. ಅಲ್ಲದೆ, ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಪ್ರಾಜೆಕ್ಟ್, ಸೆಮಿನಾರ್, ನಾಟಕ ನಿರ್ಮಾಣ, ಸಂಗೀತ ಮತ್ತು ನೃತ್ಯಗಳ ತರಗತಿಗಳಲ್ಲಿ ಭಾಗವಹಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರದರ್ಶನ ಕಲೆ ವಿಭಾಗ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲೆ ವಿಭಾಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅದರ ಪಠ್ಯಕ್ರಮದ ಅಧ್ಯಯನವನ್ನೂ ಮಾಡಲಿದ್ದೇವೆ. 2020-21ರಿಂದ ಕೋರ್ಸ್ ಆರಂಭಿಸುತ್ತೇವೆ.
-ಪ್ರೊ.ಡಿ.ಬಿ.ನಾಯ್ಕ, ಕುಲಪತಿ, ಕರ್ನಾಟಕ ಜಾನಪದ ವಿವಿ
* ರಾಜು ಖಾರ್ವಿ ಕೊಡೇರಿ