Advertisement

ದೇಶದ ಪ್ರಾಚೀನ ಇತಿಹಾಸ ತಿಳಿಯಿರಿ

11:31 AM Sep 29, 2018 | |

ಮೈಸೂರು: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ದೇಶದ ಪ್ರಾಚೀನ ಇತಿಹಾಸ ಅರಿತುಕೊಳ್ಳಬೇಕಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಹೇಳಿದರು. 

Advertisement

ನಗರದ ವಿದ್ಯಾವಿಕಾಸ್‌ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಖೀಲ ಭಾರತೀಯ ವಿದ್ಯಾರ್ಥಿ ವೃತ್ತಿಪರ ಮತ್ತು ಮಹಿಳಾ ತಂತ್ರಜ್ಞರ ಸಮ್ಮೇಳನ(ಎಐಎಸ್‌ವೈಡಬ್ಲೂಸಿ) ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಚೀನ ಭಾರತದ ಇತಿಹಾಸ, ಸಾಂಸ್ಕೃತಿಕ ವೈಭವ ತಿಳಿದುಕೊಳ್ಳಬೇಕು.

ವಿದ್ಯಾರ್ಥಿಗಳು ಕೇವಲ ಬ್ರಿಟಿಷ್‌ ಹಾಗೂ ಮಹಮದೀಯರ ಆಳ್ವಿಕೆ ಇತಿಹಾಸ ಮಾತ್ರವಲ್ಲದೆ, ಗುಪ್ತರು ಹಾಗೂ ವಿಜಯನಗರ ಅರಸರ ಕಾಲದ ಸುವರ್ಣಯುಗದ ಬಗ್ಗೆಯೂ ತಿಳಿಯಬೇಕಿದೆ. ಜಗತ್ತಿನಲ್ಲಿ ಅತಿಹೆಚ್ಚು ಯುವಜನರ ಹೊಂದಿರುವ ಭಾರತಕ್ಕೆ ಯುವಶಕ್ತಿಯೇ ಸಂಪತ್ತು ಎಂದು ತಿಳಿಸಿದರು.

ಉಪಗ್ರಹ ಉಡಾವಣೆ: ಇದೇ ವೇಳೆ ಇಸ್ರೋ ಉಪಗ್ರಹ ಕೇಂದ್ರ ನಿರ್ದೇಶಕ ಮೈಲ್‌ಸ್ವಾಮಿ ಅಣ್ಣಾದೊರೈ ಮಾತನಾಡಿ, ಚಂದ್ರನಲ್ಲಿ ನೀರಿನ ಅಂಶವಿಲ್ಲ ಎಂಬ ಈವೆರೆಗಿನ ತಿಳಿವಳಿಕೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಕೈಗೊಂಡ ಚಂದ್ರಯಾನ-1 ಸುಳ್ಳಾಗಿಸಿತು.

ಇಸ್ರೋ ಚಂದ್ರಯಾನ ಕೈಗೊಳ್ಳುವ ಮೊದಲು ಅನೇಕರು ಈಗಾಗಲೇ ಚಂದ್ರನಲ್ಲಿಗೆ ಹೋಗಿದ್ದರು. ಆದರೆ ಅಲ್ಲಿ ನೀರಿನ ಅಂಶವಿದೆ ಎಂದು ಯಾರೂ ಶೋಧಿಸಿರಲಿಲ್ಲ. ಅತ್ಯಂತ ಸಂಕೀರ್ಣವಾಗಿ ರೂಪಿಸಿದ ಉಪಗ್ರಹ ಉಡಾವಣೆ ಮಾಡುವ ಮೂಲಕ ಚಂದ್ರನಲ್ಲಿ ನೀರಿನ ಅಂಶವಿದೆ ಎಂದು ತೋರಿಸಿಕೊಟ್ಟಿತು. ಚಂದ್ರನಿಂದ 100 ಕಿ.ಮೀ. ಅಂತರಕ್ಕೆ ಮಾತ್ರ ಉಪಗ್ರಹ ಕಳಿಸುವ ಉದ್ದೇಶ ಹೊಂದಿದ್ದೆವು.

Advertisement

ಆದರೆ ಹಿರಿಯ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅಷ್ಟು ದೂರ ಹೋಗಿ, ಚಂದ್ರನ ಮೇಲೆ ಉಪಗ್ರಹ ಇಳಿಸದೆ ಇರಬಾರದು ಎಂದು ಸೂಚಿಸಿದರು. ಈ ನಿಟ್ಟಿನಲ್ಲಿ ಐದು ಮುಖ್ಯ ಸಲಕರಣೆಗಳನ್ನು ಹೊಂದಿದ್ದ ಚಂದ್ರಯಾನ ಅಂತಿಮ ರೂಪು ಪಡೆಯುವಾಗ 20ಕ್ಕೂ ಹೆಚ್ಚು ಸಲಕರಣೆಗಳನ್ನು ಒಳಗೊಂಡಿತ್ತು. ಹೀಗೆ ಅತ್ಯಂತ ಸಂಕೀರ್ಣವಾಗಿ ರೂಪುಗೊಂಡ ಚಂದ್ರಯಾನಕ್ಕೆ 3 ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದವು ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾವಿಕಾಸ ಸಂಸ್ಥೆ ಕಾರ್ಯದರ್ಶಿ ಕವೀಶ್‌ ಗೌಡ, ಪ್ರಾಂಶುಪಾಲ ಎಂ.ರವಿಶಂಕರ್‌, ಇಸಿ ವಿಭಾಗ ಮುಖ್ಯಸ್ಥ ಡಾ.ಬಿಂದು ಥಾಮಸ್‌, ಐಇಇಇ ಮಾಜಿ ನಿರ್ದೇಶಕ ಡಾ.ರಾಮಕೃಷ್ಣ ಕಪ್ಪಗಂಡು, ಐಇಇಇ ಅಧ್ಯಕ್ಷ ಡಾ.ಸುಧೀಂದ್ರ ಕೌಶಿಕ್‌, ಡೇನಿಯಲ್‌ ಲೋಟಿಸ್‌, ಪುನೀತ್‌ ಕೆ.ಮಿಶ್ರಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next