Advertisement

ಕರಾಟೆ ಕಲಿತು ಸ್ವಯಂ ರಕ್ಷಣೆ ಮಾಡಿಕೊಳ್ಳಿ: ಜಿ.ಟಿ.ದೇವೇಗೌಡ

06:55 AM Oct 16, 2018 | Team Udayavani |

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಸೋಮವಾರ  ಜಾನಪದ ಸಿರಿ, ದಸರಾ ದರ್ಶನ, ಸಿರಿಧಾನ್ಯ ಆಹಾರ ಮೇಳಕ್ಕೆ ಚಾಲನೆ ನೀಡಲಾಯಿತು. ಈ ಮಧ್ಯೆ  ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ನಾಡಿನ ಮೂಲೆ ಮೂಲೆಯಿಂದ ಬಂದಿದ್ದ 29 ಕವಿಗಳು ಕವನ ವಾಚಿಸಿದರು.

Advertisement

ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಮಹಿಳಾ ದಸರಾದಲ್ಲಿ ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಜಿ.ಟಿ.ದೇವೇಗೌಡ, ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳನ್ನು ತಡೆಯುವ ಜತೆಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಮಹಿಳೆಯರು ಕರಾಟೆ ಕಲಿಯಬೇಕಿದೆ ಎಂದು ಸಲಹೆ ನೀಡಿದರು.

ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದು ಈಗಾಗಲೇ ಎಲ್ಲಾ ರಂಗದಲ್ಲೂ ಸಾಬೀತಾಗಿದೆ. ಮಹಿಳೆಯರು ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದು, ರಾಷ್ಟ್ರಪತಿ, ರಕ್ಷಣಾ ಸಚಿವರಾಗಿ, ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಹಿಳೆಯರು ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳಲು ಕರಾಟೆ ಕಲಿಯಬೇಕಿದೆ ಎಂದರು.

ದಸರಾ ದರ್ಶನ: ಗ್ರಾಮೀಣ ಭಾಗದ ಜನರಿಗೆ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ವತಿಯಿಂದ ಆಯೋಜಿಸಿರುವ ದಸರಾ ದರ್ಶನಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ  ಚಾಲನೆ ನೀಡಿದರು.

ಮೂರು ದಿನಗಳ ಕಾಲ ನಡೆಯುವ ದಸರಾ ದರ್ಶನದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಯ 31 ತಾಲೂಕುಗಳ ಗ್ರಾಮೀಣ ಪ್ರದೇಶದವರಿಗೆ ದಸರಾ ಕಾರ್ಯಕ್ರಮ ಹಾಗೂ ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸಾರಿಗೆ ಇಲಾಖೆ 171 ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ದಸರಾ ದರ್ಶನದಲ್ಲಿ ಒಟ್ಟು 9570 ಜನತೆ ಕರೆತರಲು ಉದ್ದೇಶಿಸಲಾಗಿದೆ.

Advertisement

ಗಮನ ಸೆಳೆದ ಆಹಾರ ಮೇಳ: ಸ್ಕೌಟ್‌ ಆ್ಯಂಡ್‌ ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸೋಮವಾರ ಹಿರಿಯರ ವಿಭಾಗದಲ್ಲಿ ಸಿರಿಧಾನ್ಯ ಆಹಾರ ತಯಾರಿಕೆ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಸ್ಪರ್ಧಿಗಳು ಘಮಘಮಿಸುವ ತಿಂಡಿ ತಿನಿಸುಗಳನ್ನು ತಯಾರಿಸಿ ನೆರೆದಿದ್ದವರ ಬಾಯಲ್ಲಿ ನೀರೂರಿಸಿದರು. ಹಿರಿಯ ಮಹಿಳೆಯರು ಕೇವಲ ತೀರ್ಪುಗಾರರು ಮಾತ್ರವಲ್ಲದೆ ಸಾರ್ವಜನಿಕರನ್ನು ಆಕರ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next