Advertisement

ಪೇಸ್‌ ಎಂಬ ಉತ್ಸಾಹಿ ಯುವಕ

11:01 AM Mar 10, 2018 | Team Udayavani |

ಟೆನಿಸ್‌ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಕೂಡ ಒಬ್ಬರು. ವಯಸ್ಸು 44 ದಾಟಿದರೂ ಇನ್ನೂ ಟೆನಿಸ್‌ ಅಂಗಳದಲ್ಲಿ ಯುವಕರು ನಾಚುವಂತೆ ಸರ್ವೀಸ್‌ ಮಾಡುತ್ತಾರೆ.

Advertisement

ಎದುರಾಳಿಗಳ ಹೊಡೆತಕ್ಕೆ ತಕ್ಕನಾದ ರೀತಿಯಲ್ಲಿ ತಿರುಗೇಟು ನೀಡುತ್ತಾರೆ. ಈ ಮಧ್ಯೆಯೇ ಗಾಯವೋ, ಒಂದು ಸೋಲು ಅವರನ್ನು ಅಪ್ಪಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ಶ್ರೇಯಾಂಕದಲ್ಲಿಯೂ ಕುಸಿತವಾಯಿತು, ಪ್ರಶಸ್ತಿಯನ್ನು ಗೆಲ್ಲುತ್ತಿಲ್ಲ. ಹೀಗಾಗಿ ಪೇಸ್‌ ನಿವೃತ್ತಿ ಖಚಿತ ಎಂಬ ಸುದ್ದಿಗಳು ಹರಿದಾಡಲು ಆರಂಭಿಸುತ್ತವೆ. ಆಗಲೇ ದಿಢೀರನೆ ಎದ್ದು ನಿಲ್ಲುವ ಪೇಸ್‌ ಪೇಸ್‌ ಮತ್ತೆ ಪ್ರಶಸ್ತಿ ಗೆಲ್ಲುತ್ತಾರೆ, ಶ್ರೇಯಾಂಕದಲ್ಲಿಯೂ ಜಿಗಿತ ಕಾಣುತ್ತಾರೆ! ಪೇಸ್‌ನ ಸಮಾಕಾಲಿನ ಆಟಗಾರರೆಲ್ಲ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಕೆಲವರು ಕೋಚಿಂಗ್‌ ಆರಂಭಿಸಿದರೆ, ಇನ್ನು ಕೆಲವರು ಅಕಾಡೆಮಿ ಸ್ಥಾಪಿಸಿಕೊಂಡಿದ್ದಾರೆ. ಆದರೆ, ಪೇಸ್‌ ಅವರಲ್ಲಿ ಮಾತ್ರ ಇನ್ನು ಉತ್ಸಾಹ ಬತ್ತಿಲ್ಲ. ಹೊಸ ಪ್ರತಿಭೆಗಳ ಜತೆ ಸೇರಿ ಈತ ಪ್ರಶಸ್ತಿ ಗೆಲ್ಲುತ್ತಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರುವ ಹೊಸ ಹೊಸ ಅಸ್ತ್ರಗಳನ್ನು ಆಗಾಗ್ಲೆ ಪ್ರದರ್ಶಿಸುತ್ತಾ ಇರುತ್ತಾರೆ. ಪೇಸ್‌ಗೆ ಟೆನಿಸ್‌ ಮೇಲೆ ಇರುವ ಪ್ರೀತಿಯ ಮುಂದೆ ವಯಸ್ಸು ಯಾವ ಪರಿಣಾಮವನ್ನು ಬೀರುತ್ತಿಲ್ಲ.

ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ನಲ್ಲಿ ಆಡುತ್ತಿರುವ ಪೇಸ್‌, ವರ್ಷಗಳ ಕಾಲ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ, ಇತ್ತೀಚೆಗೆ ದುಬೈ ಓಪನ್‌ನಲ್ಲಿ ನಡೆದ ಪುರುಷರ ಡಬಲ್ಸ್‌ನಲ್ಲಿ ಅಮೆರಿಕದ ಜೆಮಿ ಸೆರೆಟಾನಿ ಜತೆ ಸೇರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಶ್ರೇಯಾಂಕದಲ್ಲಿಯೂ ಮತ್ತೂಮ್ಮೆ ಅಗ್ರ 50 ರೊಳಗೆ ಲಗ್ಗೆ ಹಾಕಿದ್ದಾರೆ.

18 ಗ್ರ್ಯಾನ್‌ಸ್ಲಾಮ್‌ ಗರಿ
ಭಾರತದ ಪರ ಗರಿಷ್ಠ ಗ್ರ್ಯಾನ್‌ಸ್ಲಾಮ್‌ ಗೆದ್ದ ಖ್ಯಾತಿ ಪೇಸ್‌ ಅವರದು. ಮಿಶ್ರ ಡಬಲ್ಸ್‌ನಲ್ಲಿ 8 ಮತ್ತು ಪುರುಷರ ಡಬಲ್ಸ್‌ನಲ್ಲಿ 10 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ 2016ರಲ್ಲಿ ಫ್ರೆಂಚ್‌ ಓಪನ್‌ ಗೆದ್ದಿರುವುದೇ ಕೊನೆಯ ಗ್ರ್ಯಾನ್‌ ಸ್ಲಾಮ್‌. ಆಮೇಲೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಪೇಸ್‌ ಪುರುಷರ ಡಬಲ್ಸ್‌ನಲ್ಲಿ 120 ಜತೆಗಾರರು ಮತ್ತು ಮಿಶ್ರ ಡಬಲ್ಸ್‌ನಲ್ಲಿ 25 ಆಟಗಾರ್ತಿಯರ ಜತೆ ಆಡಿರುವ ಇತಿಹಾಸವನ್ನು
ಹೊಂದಿದ್ದಾರೆ.

ಒಲಿಂಪಿಕ್ಸ್‌ ಪದಕ ತಂದ ಆಟಗಾರ
ಒಲಿಂಪಿಕ್ಸ್‌ನಲ್ಲಿ ನಡೆಯುವ ಟೆನಿಸ್‌ನಲ್ಲಿ ಭಾರತಕ್ಕೆ ಇಲ್ಲಿಯವರೆಗೂ ಸಿಕ್ಕಿರುವುದು ಏಕೈಕ ಪದಕ. ಅದನ್ನು ಗೆದ್ದುಕೊಟ್ಟಿದ್ದು, ಲಿಯಾಂಡರ್‌ ಪೇಸ್‌! 1996 ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪೇಸ್‌ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಮೋಘ ಆಟ ಪ್ರದರ್ಶಿಸಿದ ಪೇಸ್‌ ಕಂಚಿನ ಪದಕ ಗೆದ್ದು, ಭಾರತದ ಗರಿಮೆಯನ್ನು ಹೆಚ್ಚಿಸಿದರು.

Advertisement

ಇನ್ನೆಷ್ಟು ವರ್ಷ ಆಡುತ್ತಾರೆ?

ಪೇಸ್‌ ನಿವೃತ್ತಿಯಾಗುತ್ತಾರೆ ಅನ್ನುವಂತಹ ಸುದ್ದಿಗಳು ಕಳೆದ 7 ವರ್ಷಗಳಿಂದಲೂ ಜೋರಾಗಿ ಹರಿದಾಡುತ್ತಲೇ ಇವೆ. ಆದರೆ, ಈ ಬಗ್ಗೆ ಪೇಸ್‌ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವರ್ಷಗಳು ಕಳೆದಂತೆಲ್ಲಾ ವಯಸ್ಸನ್ನು ಹಿಮ್ಮೆಟ್ಟಿಸಿದಂತೆ ಕಾಣುತ್ತಿರುವ ಯುವಕರು ನಾಚುವಂತೆ ರ್ಯಾಕೆಟ್‌ ಬೀಸುತ್ತಿರುವ ಪೇಸ್‌ ಯಾವಾಗ ನಿವೃತ್ತಿಯಾಗುತ್ತಾರೆ ಅನ್ನುವುದನ್ನು ಅಂದಾಜಿಸುವುದು ಅಷ್ಟು ಸುಲಭವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next