Advertisement

ನನ್ನ-ಬಿಎಸ್‌ವೈ ಸಂಬಂಧ ಕೆಡಿಸಲು ಕರಪತ್ರ ಹಂಚಿಕೆ

03:45 AM Jan 09, 2017 | Team Udayavani |

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ನನ್ನ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದ ಮುಂದಿನ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಎಂದು ರಾಯಣ್ಣ ಬ್ರಿಗೇಡ್‌ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಹಂಚಲಾಗಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಕಿಡಿ ಕಾರಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಲ್‌ಎ ಸ್ಪರ್ಧಾಕಾಂಕ್ಷಿಯೊಬ್ಬರು ಈ ಕೆಲಸ ಮಾಡಿದ್ದಾರೆ. ಯಡಿಯೂರಪ್ಪರನ್ನು ಓಲೈಸಲು, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸುವ ಉದ್ದೇಶದಿಂದ ಈ ಕೆಲಸ ಮಾಡಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

ಸಿಎಂ ಆಗೋದು ಖಚಿತ: ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ ಪ್ರಮುಖರೆಲ್ಲರೂ ರಾಯಣ್ಣ ಬ್ರಿಗೇಡ್‌ ಮುಂದುವರೆಸುವಂತೆ ತಮಗೆ ತಿಳಿಸಿದ್ದಾರೆ. ಬ್ರಿಗೇಡ್‌ ವಿಚಾರದಲ್ಲಿ ಯಡಿಯೂರಪ್ಪ ಮಾತ್ರ ಇನ್ನೂ ಗೊಂದಲದಲ್ಲಿದ್ದಾರೆ. ಶೀಘ್ರದಲ್ಲಿ ಎಲ್ಲವೂ ಸರಿಹೋಗಲಿದೆ. 

ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಪುನರುಚ್ಚರಿಸಿದರು.
ಸಂಪುಟ ಉಪಸಮಿತಿ ರಚಿಸಿ: ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹಿಂದ ವರ್ಗವನ್ನು ಕಡೆಗಣಿಸಿದೆ. ಅಲ್ಪಸಂಖ್ಯಾತರ ಪರಿಸ್ಥಿತಿ ಅಧ್ಯಯನ ನಡೆಸಿ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಸಂಪುಟ ಉಪಸಮಿತಿ ರಚಿಸಿದೆ. ಯಾಕೆ ಹಿಂದ ವರ್ಗ ಮುಖ್ಯಮಂತ್ರಿ ಕಣ್ಣಿಗೆ ಕಾಣಿಸುತ್ತಿಲ್ಲವೇ? ಹಿಂದ ವರ್ಗದ ಸ್ಥಿತಿಗತಿ ಅಧ್ಯಯನ ನಡೆಸಲು ಸಂಪುಟ ಉಪಸಮಿತಿ ರಚಿಸಿ ಸಮೀಕ್ಷೆ ನಡೆಸಬೇಕು. ವರದಿ ಅನ್ವಯ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಸಮಾವೇಶ: ಸಂಗೊಳ್ಳಿ ರಾಯಣ್ಣರ ಬಲಿದಾನದ ದಿನವಾದ ಜ. 26ರಂದು ಕೂಡಲ ಸಂಗಮದಲ್ಲಿ ರಾಯಣ್ಣ ಬ್ರಿಗೇಡ್‌ ವತಿಯಿಂದ 10ಲಕ್ಷ ಜನರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ಅನೇಕ ಮಠಾಧೀಶರು, ಸಾಧುಸಂತರು ಪಾಲ್ಗೊಳ್ಳಲಿದ್ದಾರೆ ಎಂದು ಈಶ್ವರಪ್ಪ ನುಡಿದರು.

Advertisement

ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ತಡೆಗಟ್ಟಲು ಆಗದಿದ್ದಲ್ಲಿ ಗೃಹಸಚಿವ ಜಿ. ಪರಮೇಶ್ವರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಿರ್ಲಕ್ಷéವೇ ಘಟನೆ ಪುನರಾವರ್ತನೆಗೆ ಕಾರಣ. ಲೈಂಗಿಕ ಕಿರುಕುಳ ಸಾಮಾನ್ಯ ಸಂಗತಿ ಎಂದು ಗೃಹಸಚಿವರೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆಂದರೆ, ಇನ್ನು ಗೃಹ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ತಲೆ ಕೆಡಿಸಿಕೊಳ್ಳುತ್ತದೆಯೇ?
-ಕೆ.ಎಸ್‌.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ
 

Advertisement

Udayavani is now on Telegram. Click here to join our channel and stay updated with the latest news.

Next