Advertisement

ಹಕ್ಕುಪತ್ರ ನೀಡುವುದಾಗಿ ಹೇಳಿ, ಜನಸ್ಪಂದನೆ ನಡೆಸಿದ ನಾಯಕರು

11:47 AM Dec 22, 2017 | |

ಬೆಂಗಳೂರು: ಹಕ್ಕುಪತ್ರ ನೀಡುವುದಾಗಿ ಕೊಳಗೇರಿ ನಿವಾಸಿಗಳಿಗೆ ಮಾಹಿತಿ ನೀಡಿ ಅವರನ್ನು ಕರೆಸಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದ ಜನಪ್ರತಿನಿಧಿಗಳ ಕ್ರಮಕ್ಕೆ ರಾಗೀಗುಡ್ಡ ಕೊಳಗೇರಿ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ. ಜೆ.ಪಿ.ನಗರದ ರಾಗೀಗುಡ್ಡ ಕೊಳಗೇರಿಯ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ
ಮಂಡಳಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ನಿವಾಸಿಗಳು ಹಕ್ಕುಪತ್ರ ನೀಡಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
 
“ರಾತ್ರಿ ತಮಟೆ ಹೊಡೆಸಿ ನಾಳೆ ಸಚಿವರು ಹಕ್ಕು ಪತ್ರಗಳ ವಿತರಿಸಲಿದ್ದು, ಎಲ್ಲ ನಿವಾಸಿಗಳು ಸಭೆಗೆ ಹಾಜರಾಗಬೇಕು ಎಂದು ಮಾಹಿತಿ ನೀಡಿದ್ದರು. ಹಕ್ಕುಪತ್ರ ನೀಡುತ್ತಾರೆಂದು ಕೆಲಸಕ್ಕೆ ರಜೆ ಹಾಕಿ ಸಭೆಗೆ ಬಂದರೆ, ಇವರು ಚುನಾವಣಾ ಪ್ರಚಾರಕ್ಕಾಗಿ ಸಭೆ ನಡೆಸಿದರು’ ಎಂದು ಸ್ಥಳೀಯ ನಿವಾಸಿ ಗೀತಾ ಬೇಸರ ವ್ಯಕ್ತಪಡಿಸಿದರು.
 
ಹಕ್ಕುಪತ್ರಗಳನ್ನು ನೀಡಲು ಮುಂದಾಗದ ಜನಪ್ರತಿನಿಧಿಗಳು ಕೇವಲ ಭರವಸೆ ನೀಡಿ ಹೋದರು. ಹಕ್ಕುಪತ್ರ ಪಡೆಯಲು 21,600 ರೂ. ಡಿ.ಡಿ. ಪಾವತಿಸಿ ಮೂರು ವರ್ಷವಾದರೂ ಈವರೆಗೆ ಹಕ್ಕು ಪತ್ರ ಕೈಸೇರಿಲ್ಲ’ ಎಂದು ಸುಶೀಲಮ್ಮ ದೂರಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮಾತನಾಡಿ, ಸರ್ಕಾರದಿಂದ ಬಡವರು, ಹಿಂದುಳಿದವರಿಗಾಗಿ ಸರ್ಕಾರ  ದಿಂದ 1 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಲಾಗಿದೆ. ಮನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. 

Advertisement

ಕೊಳಗೇರಿಯ ಕುರಿತು ಮಾಹಿತಿ ನೀಡಿದ ರಾಣಿಶ್ರೀ, ರಾಗೀಗುಡ್ಡ ಕೊಳಗೇರಿಯಲ್ಲಿ ಒಟ್ಟು 48 ಬ್ಲಾಕ್‌ಗಳಲ್ಲಿ 1500 ಮನೆಗಳಿದ್ದು, ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದಾರೆ. ಉಳಿದವರಿಗೆ ಈವರೆಗೆ ಹಕ್ಕುಪತ್ರ ನೀಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ ಎಂದು ಆರೋಪಿಸಿದರು. ನಿವಾಸಿಗಳಿಂದ ಅಹವಾಲು ಸ್ವೀಕರಿಸಿದ ವಸತಿ ಸಚಿವ ಎಂ.ಕೃಷ್ಣಪ್ಪ, ಕೊಳಗೇರಿ ನಿವಾಸಿಗಳ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಅಂಗನವಾಡಿಯೂ ಇಲ್ಲ: ಆಕ್ಷೇಪ
ರಾಗೀಗುಡ್ಡ ಕೊಳಗೇರಿಯಲ್ಲಿ ಸುಮಾರು 1500 ಮನೆಗಳಿದ್ದು, ನೂರಾರು ಮಕ್ಕಳು ಕಿಲೋ ಮೀಟರ್‌ ದೂರದ ಅಂಗನವಾಡಿ ಹಾಗೂ ಶಾಲೆಗಳಿಗೆ ಹೋಗಬೇಕಿದ್ದು, ಕೂಡಲೇ ಕೊಳಗೇರಿಗೆ ಸಮೀಪದಲ್ಲಿ ಅಂಗನವಾಡಿ ಹಾಗೂ ಶಾಲೆ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ವಿದ್ಯಾರ್ಥಿಗಳಾದ ಅಲ್ಮಾಸ್‌ ಹಾಗೂ ಹರ್ಷಿಯಾ ಸಭೆಯಲ್ಲಿ ಒತ್ತಾಯಿಸಿದರು. 

ಕೊಳಗೇರಿ ಪ್ರದೇಶದಲ್ಲಿ ಇನ್ನೂ 150 ಮನೆಗಳನ್ನು ಹಂಚಿಕೆ ಮಾಡಬೇಕಿದ್ದು, ಜನವರಿ ಅಥವಾ ಫೆಬ್ರವರಿ ವೇಳೆಗೆ ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಬೇಕು. ಜತೆಗೆ ಹೊರಗಿನವರಿಗೆ ಮನೆಗಳನ್ನು ಹಂಚಿಕೆ ಮಾಡದೆ, ಅರ್ಹ ಫ‌ಲಾನುಭವಿಗಳಿಗೆ ಹಂಚಿಕೆ ಮಾಡಬೇಕು.
 ಬಿ.ಎನ್‌.ವಿಜಯ್‌ ಕುಮಾರ್‌, ಶಾಸಕ

ಮನೆಗಳಿಗೆ ಒಳಚರಂಡಿ ನೀರು ನುಗ್ಗುತ್ತೆ ಒಳಚರಂಡಿ ಪೈಪುಗಳನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ 32ನೇ ಬ್ಲಾಕ್‌ನಿಂದ 34ನೇ ಬ್ಲಾಕ್‌ವರೆಗೆ ಮ್ಯಾನ್‌ ಹೋಲ್‌ಗ‌ಳು ಉಕ್ಕಿ ಹರಿಯುತ್ತವೆ. ಸಚಿವರು ಬರುತ್ತಿದ್ದಾರೆ ಎಂದು ಸ್ವತ್ಛಗೊಳಿಸಿದ್ದು, ತಿಂಗಳಿಗೆ ಪ್ರತಿ ಮನೆಯವರು 100 ರೂ. ಕೊಟ್ಟು ಸರಿಪಡಿಸಬೇಕಾದ ಪರಿಸ್ಥಿತಿಯಿದೆ ಎಂದು ನಾಗಮಣಿ ಎಂಬುವರು ಅಹವಾಲು ಹೇಳಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next