Advertisement

ಮೀಸಲು ಕಿಚ್ಚು? ವಿವಿಧ ಸಮುದಾಯಗಳ ಮುಖಂಡರಿಂದ ಸರಕಾರಕ್ಕೆ ಒತ್ತಾಯ

11:32 PM Oct 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ ಬೆನ್ನಲ್ಲೇ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯ ಕಿಚ್ಚು ದಿನ ಕಳೆದಂತೆ ಹೆಚ್ಚುವ ಲಕ್ಷಣಗಳು ದಟ್ಟವಾಗತೊಡಗಿವೆ.

Advertisement

ಮೀಸಲಾತಿ ವಿಚಾರದಲ್ಲಿ ವಿವಿಧ ಸಮುದಾಯಗಳಿಂದ ಸರಕಾರಕ್ಕೆ ಗಡುವು ನೀಡುವ, ಎಚ್ಚರಿಕೆ ಕೊಡುವ ಬೆಳವಣಿಗೆಗಳು ಪ್ರಾರಂಭಗೊಂಡಿವೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡುವುದಾದರೆ ಶೇ. 16ರಷ್ಟಿರುವ ಒಕ್ಕಲಿಗ ಸಮಯದಾಯಕ್ಕೂ ಮೀಸಲಾತಿ ಹೆಚ್ಚಳ ಮಾಡಲಿ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರಷ್ಟೇ ಹೇಳಿದ್ದರು.

ಸದ್ಯ ಇರುವ 3ಎ ಮೀಸಲಾತಿಯನ್ನು ಶೇ. 4ರಿಂದ ಶೇ. 10ಕ್ಕೆ ಹೆಚ್ಚಳ ಮಾಡುವಂತೆ ಸರಕಾರವನ್ನು ಆಗ್ರಹಿಸಿರುವ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್‌. ಬಾಲಕೃಷ್ಣ, ಬೇಡಿಕೆ ಪರಿಗಣಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಒಕ್ಕಲಿಗರ ಮೀಸಲಾತಿ ಬೇಡಿಕೆ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್‌ ಕೂಡ ಎಚ್ಚರಿಸಿದ್ದಾರೆ.

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಚಾರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯೊಳಗೆ ಸಭೆ ಕರೆಯದಿದ್ದರೆ ಜಯಂತಿಯನ್ನು ಬಹಿಷ್ಕಾರ ಮಾಡುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಗಡುವು ಮತ್ತು ಎಚ್ಚರಿಕೆಯ ಸಾಲಿನಲ್ಲಿ ಇನ್ನಷ್ಟು ಸಮುದಾಯಗಳು ಸೇರಿಕೊಳ್ಳುವುದನ್ನು ಅಲ್ಲಗಳೆಯುವಂತಿಲ್ಲ.

ಈ ಮಧ್ಯೆ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಚಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದಿದ್ದು, ಪಂಚಮಸಾಲಿ ಸಮುದಾಯದ ವಾಸ್ತವಿಕ ದತ್ತಾಂಶವನ್ನು ಸಂಗ್ರಹಿಸುವ ಕೆಲಸ ಅರ್ಧ ಮಾತ್ರ ಆಗಿದೆ. ಇನ್ನೂ ಅರ್ಧ ಕೆಲಸ ಬಾಕಿ ಇದೆ. ಈ ಕೆಲಸ ಅಷ್ಟು ಬೇಗ ಮುಗಿಯುವಂತಹದ್ದಲ್ಲ. ಸಾಕಷ್ಟು ಸಮಯ ಬೇಕು ಎಂದು ಹೇಳಲಾಗುತ್ತಿದೆ. ಹೀಗಾಗಿ ಸರಕಾರ ಖಚಿತ ಭರವಸೆ ನೀಡುವ ಸ್ಥಿತಿಯಲ್ಲೂ ಇಲ್ಲ.
ಈ ಮಧ್ಯೆ ಒಳಮೀಸಲಾತಿ ಜಾರಿಗೆ ತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿರುವುದರಿಂದ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ವಿಚಾರ ಇನ್ನಷ್ಟು ಜಟಿಲಗೊಳ್ಳಲಿದೆ.

Advertisement

ಇದು ಈ ಸಮಯದಾಯಗಳ ಆಂತರಿಕ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ. ಇದರ ಜತೆಗೆ ತಮ್ಮನ್ನು ಎಸ್‌ಟಿಗೆ ಸೇರಿಸಲು ಕುರುಬರು ಬೇಡಿಕೆ ಇಟ್ಟಿದ್ದಾರೆ. ಅದೇ ರೀತಿ ಮೀಸಲಾತಿ ಹೆಚ್ಚಿಸಬೇಕು, ಈಗಿರುವ ಪ್ರವರ್ಗದಿಂದ ಇನ್ನೊಂದು ಪ್ರವರ್ಗಕ್ಕೆ ಸೇರಿಸಬೇಕು ಎಂದು 40ಕ್ಕೂ ಹೆಚ್ಚು ಸಮುದಾಯಗಳು ಸರಕಾರದ ಮುಂದೆ ಬಹಳ ದಿನಗಳಿಂದ ಬೇಡಿಕೆ ಇಟ್ಟಿವೆ. ಈಗ ಆ ಬೇಡಿಕೆಗಳು ತೀವ್ರ ಸ್ವರೂಪ ಪಡೆದುಕೊಂಡು, ಮೀಸಲಾತಿ ಕಿಚ್ಚು ಇನ್ನಷ್ಟು ಕಾವು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಒಕ್ಕಲಿಗ ಸಮುದಾಯದಲ್ಲಿ ಶೇ. 70ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇದನ್ನು ಗಮನದಲ್ಲಿಟ್ಟು ಕೊಂಡು ಮುಖ್ಯಮಂತ್ರಿ ಬೊಮ್ಮಾಯಿ ಶೇ. 16ರಷ್ಟು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ. 4ರಿಂದ ಶೇ. 10ಕ್ಕೆ ಹೆಚ್ಚಳ ಮಾಡಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು.
– ಸಿ.ಎನ್‌. ಬಾಲಕೃಷ್ಣ
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ

ಪಂಚಮಸಾಲಿ ಸಮುದಾಯವನ್ನು 2-ಎಗೆ ಸೇರಿಸುವ ಸಂಬಂಧ ವರದಿ ನೀಡಲು ಅಧ್ಯಯನ ಕಾರ್ಯ ನಡೆದಿದೆ. ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಸೋಮವಾರದಿಂದ ಮತ್ತೆ ಜಿಲ್ಲಾ ಪ್ರವಾಸ ಆರಂಭಿಸಲಿದ್ದೇವೆ. ಈ ಮಧ್ಯೆ ವೀರಶೈವ-ಲಿಂಗಾಯತ ಮಹಾಸಭಾ ಕೂಡ ಮತ್ತೂಂದು ಮನವಿ ಕೊಟ್ಟಿದ್ದು, ಪರಿಶೀಲನೆ ನಡೆಸಲಾಗುತ್ತದೆ.
– ಕೆ. ಜಯಪ್ರಕಾಶ್‌ ಹೆಗ್ಡೆ
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next