“ಬೀರ್‌ಬಲ್’ ಎಂಬ ಚಿತ್ರ ಅನೇಕ ದಿನಗಳಿಂದ ಸುದ್ದಿ ಮಾಡುತ್ತಲೇ ಇದೆ. ಟ್ರೇಲರ್, ಟೈಟಲ್ ಸಾಂಗ್ … ಹೀಗೆ ಅನೇಕ ವಿಷಯಗಳಿಂದ ಸುದ್ದಿಯಲ್ಲಿದ್ದ “ಬೀರ್‌ಬಲ್’ ಚಿತ್ರ ಇಂದು (ಜ.18)ತೆರೆಕಾಣುತ್ತಿದೆ. ಶ್ರೀನಿ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ “ಶ್ರೀನಿವಾಸ ಕಲ್ಯಾಣ’ ಸಿನಿಮಾ ಮಾಡಿದ್ದ ಶ್ರೀನಿಗೆ ಆ ಚಿತ್ರಕ್ಕಾಗಿ ಸೆನ್ಸಾರ್‌ನಿಂದ “ಎ’ ಪ್ರಮಾಣಪತ್ರ ಸಿಕ್ಕಿತ್ತು. ಆದರೆ, ಈ ಬಾರಿ “ಬೀರ್‌ಬಲ್’ ಕ್ಕೆ “ಯು’ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಹೊಸ ಜಾನರ್‌ನ ಸಿನಿಮಾಕ್ಕೆ ಕೈ ಹಾಕಿದ್ದಾರೆ ಶ್ರೀನಿ. ಚಿತ್ರವನ್ನು ಟಿ.ಆರ್.ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಹಿಂದೆ “ಚಮಕ್’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್ ಅವರಿಗೆ ಆ ಎರಡು ಚಿತ್ರಗಳಂತೆ ಈ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ವಿಶ್ವಾಸವಿದೆ. “ಬೀರ್‌ಬಲ್’ ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದು, ಹೊಸ ಜಾನರ್‌ನ ಸಿನಿಮಾವಾಗಿ ಪ್ರೇಕ್ಷಕ ಚಿತ್ರವನ್ನು ಸ್ವೀಕರಿಸುತ್ತಾನೆ ಎಂಬ ವಿಶ್ವಾಸ ಅವರದು.
ನಿರ್ದೇಶಕ ಕಂ ನಾಯಕ ನಟ ಶ್ರೀನಿ ಹೇಳುವಂತೆ, ಇದು ಪತ್ತೇದಾರಿ ಶೈಲಿಯ ಸಿನಿಮಾವಾಗಿದ್ದು, ಹೊಸ ಬಗೆಯ ನಿರೂಪಣೆಯಲ್ಲಿ ಸಾಗುತ್ತದೆಯಂತೆ. ವಕೀಲನೊಬ್ಬ ಪ್ರಕರಣವೊಂದನ್ನು ಹೇಗೆ ಕಂಡುಹಿಡಿಯುತ್ತಾನೆ, ಅದರ ಜಾಡು ಹಿಡಿದು ಹೇಗೆ ಸಾಗುತ್ತಾನೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುವುದಾಗಿ ಹೇಳುತ್ತಾರೆ ಶ್ರೀನಿ. ಚಿತ್ರದ ಪೋಸ್ಟರ್‌ನಿಂದ ಹಿಡಿದು ಪ್ರತಿಯೊಂದು ಅಂಶದಲ್ಲೂ ಹೊಸತನ ನೀಡಲು ಸಾಕಷ್ಟು ಪ್ರಯತ್ನಿಸಿದ್ದಾಗಿ ಹೇಳುವ ಶ್ರೀನಿ, ಚಿತ್ರದ ಹಾಡೊಂದನ್ನು 8ಡಿಯಲ್ಲಿ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಹಿಂದೆ ರಜನಿಕಾಂತ್ ಅವರ “2.0′ ಚಿತ್ರದ ಹಾಡೊಂದು 8ಡಿಯಲ್ಲಿ ಬಂದು ದೊಡ್ಡ ಸುದ್ದಿ ಮಾಡಿತ್ತು. ಅದರಂತೆ ಈಗ ಕನ್ನಡದ “ಬೀರ್‌ಬಲ್’ ಚಿತ್ರದ ಹಾಡೊಂದನ್ನು 8ಡಿಯಲ್ಲಿ ಮಾಡಲಾಗಿದ್ದು, ಆ ಪ್ರಯತ್ನದಲ್ಲಿ ತಯಾರಾದ ಕನ್ನಡದ ಮೊದಲ ಹಾಡು “8ಡಿ’ ಎಂಬುದು ಚಿತ್ರತಂಡದ ಹೆಗ್ಗಳಿಕೆ.
ಅಂದಹಾಗೆ, “ಬೀರ್‌ಬಲ್ ಚಿತ್ರ ಮೂರು ಹಂತಗಳಲ್ಲಿ ಬರಲಿದೆ. ಈಗ ಮೊದಲ ಹಂತವಾದ “ಫೈಂಡಿಂಗ್ ವಜ್ರಮುನಿ’ ಬಿಡುಗಡೆಯಾಗುತ್ತಿದ್ದು, ನಂತರ “ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು’ ಮತ್ತು “ತುರೇ ಮಣೆ’ ಬಿಡುಗಡೆಯಾಗಲಿವೆ. ನಿರ್ದೇಶಕ ಶ್ರೀನಿ, ಈ ಮೂರು ಭಾಗಗಳಲ್ಲೂ ಬೀರಬಲ್ ಎಂಬ ಲಾಯರ್‌ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಲಾಯರ್‌ವೊಬ್ಬನ ಸಾಹಸಗಳನ್ನು ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನಕ್ಕೆ ಶ್ರೀನಿ ಕೈ ಹಾಕಿದ್ದಾರೆ.
ಚಿತ್ರದಲ್ಲಿ ಮಧುಸೂದನ್, ರವಿಭಟ್ ಪ್ರಮುಖ ಪಾತ್ರ ಮಾಡಿದ್ದು, ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡರು. ಹೊಸ ಬಗೆಯ ಕಥೆಯನ್ನು ಶ್ರೀನಿ, ವಿಭಿನ್ನವಾಗಿ ನಿರೂಪಿಸಿದ್ದಾರೆಂಬುದು ಇಬ್ಬರ ಸಂತಸದ ನುಡಿ. ಉಳಿದಂತೆ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಭರತ್, ಸಂಭಾಷಣೆ ಬರೆದ ಪ್ರಸನ್ನ ಸೇರಿದಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.