ಬೆಂಗಳೂರು: ಭೂಗತ ಲೋಕದ ಕರಿನೆರಳಿನಲ್ಲಿ ದಶಕದ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಯುವ ವಕೀಲ ನೌಶಾದ್ ಕಾಸೀಂಜೀ ಹತ್ಯೆ ಪ್ರಕರಣ ತನಿಖೆಯ 2ನೇ ಅಧ್ಯಾಯವನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಚುರುಕುಗೊಳಿಸಿದೆ. ಕೆಲ ತಿಂಗಳ ಹಿಂದಷ್ಟೇ ಭೂಗತಪಾತಕಿ ರವಿ ಪೂಜಾರಿ ಬಂಧನದೊಂದಿಗೆ ನೌಶಾದ್ ಹತ್ಯೆ ಕೇಸ್ ಕೂಡ ರೀ ಓಪನ್ ಆಗಲಿದೆ ಎಂಬುದು ಧೃಢಪಟ್ಟಿತ್ತು.
ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆ ಸಲುವಾಗಿ ರವಿ ಪೂಜಾರಿಯನ್ನು ಹತ್ತು ದಿನ ಕಸ್ಟಡಿಗೆ ಪಡೆದುಕೊಂಡು ತನಿಖೆಗೆ ವೇಗ ನೀಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್, ನೌಶಾದ್ ಕೊಲೆ ಕೇಸ್ ಸಿಸಿಬಿಗೆ ವರ್ಗಾವಣೆಗೊಳಿಸಿದ ಬೆನ್ನಲ್ಲೇ ತನಿಖಾ ತಂಡ ಮಂಗಳೂರಿಗೆ ತೆರಳಿ ತನಿಖಾ ಪ್ರಕ್ರಿಯೆ ಆರಂಭಿಸಿದೆ. ಜತೆಗೆ, ಪ್ರಕರಣಕ್ಕೆ ಸಂಬಂಧ ಸ್ಥಳೀಯ ಪೊಲೀಸರು ನಡೆಸಿದ್ದ ತನಿಖಾ ದಾಖಲೆ ಗಳನ್ನು ಪಡೆದು ತನಿಖೆ ಮುಂದುವರಿಸಿದೆ. ಪ್ರಕರಣದಲ್ಲಿ ಆರೋಪಿಯೂ ಆಗಿರುವ ರವಿ ಪೂಜಾರಿಯನ್ನು ಹತ್ತು ದಿನ ಕಸ್ಟಡಿಗೆ ಪಡೆದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಪೂಜಾರಿ ವಿರುದ್ಧದ ಆರೋಪ ಏನು?: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಪರ ವಕೀಲ ನೌಶಾದ್ ನ್ಯಾಯಾಲಯ ಗಳಲ್ಲಿ ವಾದಿಸುತ್ತಿದ್ದರು. ಭೂಗತ ಲೋಕದಲ್ಲಿ ಮಲಬಾರಿಯ ವೈರತ್ವ ಪೂಜಾರಿಗಿತ್ತು. ಹೀಗಾಗಿ, ರವಿಪೂಜಾರಿ ನೌಶಾದ್‌ಗೆ ಹಲವು ಬಾರಿ ಕರೆ ಮಾಡಿ ಜೀವಬೆದರಿಕೆ ಒಡ್ಡಿದ್ದ. ಜತೆಗೆ, ತನ್ನ ಸಹಚರ ಯುವಕರಿಗೆ ಸುಪಾರಿ ನೀಡಿ ನೌಶಾದ್ ಹತ್ಯೆ ಮಾಡಿಸಿದ್ದ ಎಂಬ ಆರೋಪವಿದೆ. ಈ ಅಂಶ ಸ್ಥಳೀಯ ಪೊಲೀಸರ ಆರೋಪ ಪಟ್ಟಿ ಯಲ್ಲೂ ಇದೆ. ಈ ಬಗ್ಗೆ ತನಿಖೆ ನಡೆಸ ಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದರು.
ಪ್ರಕರಣದ ಸದ್ಯದ ಸ್ಥಿತಿ!: ಪ್ರಕರಣದ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ಕೂಡ ನೌಶಾದ್ ಹತ್ಯೆ ಪ್ರಕರಣ ದಲ್ಲಿ ರವಿ ಪೂಜಾರಿ, ಕಲಿ ಯೋಗೇಶ್ ಪಾತ್ರ ಇರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿ ಇಬ್ಬರೂ ಆರೋಪಿಗಳನ್ನಾಗಿ ಪರಿಗಣಿಸಿದ್ದರು.ಜತೆಗೆ, ನೌಶಾದ್‌ಗೆ ಪೂಜಾರಿ ಕರೆ ಮಾಡಿ ಜೀವಬೆದರಿಕೆ ಹಾಕಿದ್ದ ಎಂಬುದನ್ನೂ ಪತ್ತೆಹಚ್ಚಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸೆಷನ್ಸ್ ಕೋರ್ಟ್ ಆಗ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಪೂಜಾರಿ ಹಾಗೂ ಕಲಿ ಯೋಗೇಶ್ ವಿರುದ್ಧದ ಆರೋಪಪಟ್ಟಿ ಯನ್ನು ಪ್ರತ್ಯೇಕಗೊಳಿಸಿತ್ತು.
ಜತೆಗೆ ಇಬ್ಬರು ಆರೋಪಿಗಳಾದ ಶಿವಪ್ರಕಾಶ್ ಹಾಗೂ ರವಿ ಶುಕ್ವಾಯ್ ಅವರನ್ನು ಖುಲಾಸೆಗೊಳಿಸಿತ್ತು. ಉಳಿದ ಆರೋಪಿಗಳಾದ ದಿನೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ, ರಿತೇಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ಸುಬ್ರಹ್ಮಣ್ಯ ಹಾಗೂ ಗಣೇಶ್ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಿ 2015ರಲ್ಲಿ ಆದೇಶ ಹೊರಡಿಸಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದ ದಿನೇಶ್ ಶೆಟ್ಟಿ ಸೇರಿದಂತೆ ಐವರು ಆರೋಪಿಗಳು ಖುಲಾಸೆಗೊಳಿಸಿ 2018ರಲ್ಲಿ ತೀರ್ಪು ನೀಡಿತ್ತು.