ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರ್.ಆರ್. ನಗರದ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದೆ ಎನ್ನುವುದಕ್ಕೆ ಸಾಕ್ಷಿಗಳ ಹೇಳಿಕೆಯಲ್ಲಿ ಒಂದೇ ಒಂದು ಪದ ಇಲ್ಲ. ಕೊಲೆಯ ಉದ್ದೇಶ ಮತ್ತು ಪಿತೂರಿಗೆ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಪ್ರಕರಣದ 11ನೇ ಆರೋಪಿ ಹಾಗೂ ನಟ ದರ್ಶನ್ ಅವರ ಮ್ಯಾನೇಜರ್ ನಾಗರಾಜು ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್. ನಾಗರಾಜು ಮತ್ತಿತರರು ಸಲ್ಲಿಸಿ ರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರವೂ ಮುಂದುವರಿಸಿತು.
ವಿಚಾರಣೆ ವೇಳೆ ನಟ ದರ್ಶನ್ ಅವರ ಮ್ಯಾನೇಜರ್ ಆರ್. ನಾಗರಾಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಘಟನೆ ನಡೆದಿರುವ ಕುರಿತು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳಲ್ಲಿನ ದ್ವಂದ್ವಗಳು, ಎಫ್ ಐಆರ್ ದಾಖಲಿಸಲು ವಿಳಂಬ ಮಾಡಿರುವುದು, ರೇಣುಕಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬವಾಗಿರುವುದು, ಕೊಲೆ ಪ್ರಕರಣದ ಪೂರ್ಣ ಮಾಹಿತಿಯು 132ನೇ ಸಾಕ್ಷಿಯಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ಅವರಿಗೆ ಇದ್ದರೂ, ಅವರನ್ನು ಬಿಟ್ಟು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ನರೇಂದ್ರಸಿಂಗ್ ದೂರು ಆಧರಿಸಿ ತಡವಾಗಿ ಎಫ್ಐಆರ್ ದಾಖಲಿಸಿ ರುವುದು ಸೇರಿದಂತೆ ಇಡೀ ಪ್ರಕರಣದಲ್ಲಿ ಆಗಿರುವ 11ಕ್ಕೂ ಹೆಚ್ಚು ವ್ಯತ್ಯಯಗಳನ್ನು ನ್ಯಾಯಾಲ ಯದ ಮುಂದೆ ಪಟ್ಟಿ ಮಾಡಿ ವಿವರಿಸಿದರು. ಒಂದು ಗಂಟೆ ಸಂದೇಶ್ ಚೌಟ ವಾದ ಮಂಡಿಸಿ, ಮುಕ್ತಾಯಗೊಳಿಸಿದರು.
ಪವಿತ್ರಾಗೌಡ ಸೇರಿ ಉಳಿದ ಆರೋಪಿಗಳ ಪರ ವಕೀಲರು ವಾದ ಮಂಡಿಸಬೇಕಿರುವ ಹಿನ್ನೆಲೆಯಲ್ಲಿ ನ್ಯಾಯಪೀಠವು ವಿಚಾರಣೆ ಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು. ಗುರುವಾರ (ನ.28) ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮುಕ್ತಾಯಗೊಳಿಸಿದ್ದರು. ಆರೋಪಿಗಳ ಪರ ವಕೀಲರ ವಾದ ಮುಗಿದ ಮೇಲೆ ಪ್ರಾಸಿಕ್ಯೂಷನ್ ಪರ ವಕೀಲರು ಪ್ರತಿವಾದ ಮಂಡಿಸಲಿದ್ದಾರೆ.
ದರ್ಶನ್ ಸಹಚರರ ಪರವಾಗಿ ವಕೀಲರ ವಾದ ಏನು?
ರೇಣುಕಸ್ವಾಮಿ ದೇಹ ಹೆಪ್ಪುಗಟ್ಟಿದ್ದರಿಂದ ಎಷ್ಟೊತ್ತಿಗೆ ಸಾವು ಸಂಭವಿಸಿದೆ ಎಂದು ಗೊತ್ತಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಫೋಟೋಗಳನ್ನು ನೋಡಿ ಸಾವಿನ ಸಮಯ ಆಂದಾಜಿಸಲಾಗಿದೆ.
ಕೊಲೆ ನಡೆದಿದೆ ಎನ್ನಲಾದ ಪಟ್ಟಣಗೆರೆ ಶೆಡ್‌ನ ಮಹಜರು ಪ್ರಕ್ರಿಯೆ ವಿಳಂಬವಾಗಿದೆ.
ಹಲ್ಲೆ ನಡೆಸಿದವರ ಬಳಿ ಮಾರಕಾ ಸ್ತ್ರಗಳು ಇರಲಿಲ್ಲ ಎಂಬುದು ಸಾಕ್ಷಿ ಗಳ ಹೇಳಿಕೆಯಿಂದ ಗೊತ್ತಾಗುತ್ತದೆ.
ಜಪ್ತಿ ಮಾಡಲಾದ ವಸ್ತುಗಳ ಎಫ್ ಎಸ್‌ಎಲ್ ವರದಿ ವಿರುದ್ಧವಾಗಿದೆ ಬಂದಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸುವಲ್ಲಿ ವಿಳಂಬವಾಗಿದೆ.
ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಕೊಲೆಯ ಉದ್ದೇಶದ ಬಗ್ಗೆ ಪೂರಕ ಅಂಶಗಳಿಲ್ಲ.
ಬಹುತೇಕ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ.
ಈ ಕಾರಣಗಳಿಂದಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು.