ಶಹಾಬಾದ: ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರತಿನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಬೇಕಾಗುವಷ್ಟು ಕಾನೂನು ಅರಿವು ಪಡೆಯುವುದು ಅಗತ್ಯ ಎಂದು ನಗರ ನ್ಯಾಯಾಲಯದ ನ್ಯಾಯಾಧೀಶ ಮಲ್ಲೇಶಿ ಪರಶುರಾಮ ಮೋಹಿತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾನೂನು ಸೇವಾ ಸಮಿತಿ ಚಿತ್ತಾಪುರ, ನ್ಯಾಯವಾದಿಗಳ ಸಂಘದ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವ ವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕವಿದೆ. ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯ ಅಳವಡಿಸಲಾಗಿದೆ. ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಅನಧಿಕೃತ ಕಟ್ಟಡ ಮುಲಾಜಿಲ್ಲದೆ ಕೆಡವಿ..!
ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಹಿಂದೆ ಕಾನೂನು ನ್ಯಾಯಾಲಯದ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿತ್ತು. ಈಗ ಮನೆ ಬಾಗಿಲಿಗೆ ಜನಸಾಮಾನ್ಯರ ಅನುಕೂಲಕ್ಕಾಗಿ ಕಾನೂನು ಅರಿವು-ನೆರವನ್ನು ತಲುಪಿಸಲಾಗುತ್ತಿದೆ. ನೆಮ್ಮದಿಯುತ ಬದುಕು ನಮ್ಮದಾಗಬೇಕಾದರೆ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯ ಎಂದರು.
ನಗರಸಭೆ ಪೌರಾಯುಕ್ತ ಡಾ| ಕೆ. ಗುರಲಿಂಗಪ್ಪ ಮಾತನಾಡಿ, ಜನರಲ್ಲಿ ಕಾನೂನು ಅರಿವಿನ ಕೊರತೆಯಿಂದಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಕಾನೂನು ಬಗ್ಗೆ ಅರಿಯುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಪಿಐ ಸಂತೋಷ ಹಳ್ಳೂರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಸಹಾಯಕ ಅಭಿಯೋಜಕರಾದ ಸುನೀತಾ ಮರತೂರ, ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ ಇತರರು ಇದ್ದರು.