Advertisement

ಅವರಿಗೊಂದು, ನಮಗೊಂದು ಕಾನೂನು ಸರಿಯಲ್ಲ; ಜಾರಕಿಹೊಳಿ

05:57 PM Jan 06, 2022 | Team Udayavani |

ಗೋಕಾಕ: ಬಿಜೆಪಿಯವರು ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ, ಕುಂಭಮೇಳ, ದೊಡ್ಡ ದೊಡ್ಡ ಕಾರ್ಯಕ್ರಮ, ರಾಜಕೀಯ ಸಮಾವೇಶ ಮಾಡುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಕಾನೂನು ಬಳಸಿಕೊಳ್ಳುವುದು ಸರಿಯಲ್ಲ. ಸರ್ಕಾರ ಹಾಗೆ ಮಾಡಬಾರದು, ಎಲ್ಲರಿಗೂ ಒಂದೇ ಸಮಾನ ಕಾನೂನು ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‌ ಪಕ್ಷದ ಮಹತ್ವದ ಹೋರಾಟ. ನೀರಿಗಾಗಿ ನಮ್ಮ ಹೋರಾಟ ನಡೆಯುತ್ತಿದ್ದು, ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ನಮ್ಮ ನಾಯಕರು ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ. ನಾನು ಕೂಡ ಹೋಗಲಿದ್ದೇನೆ. ಶನಿವಾರ, ಭಾನುವಾರ ವೀಕೆಂಡ್‌ ಕರ್ಫ್ಯೂ ಘೋಷಣೆ ಮಾಡಿದ್ದಾರೆ.

ಭಾನುವಾರವೇ ನಮ್ಮ ಪಾದಯಾತ್ರೆ ಆರಂಭವಾಗುತ್ತಿದೆ. ಪ್ರತಿಭಟನೆ, ಸಾರ್ವಜನಿಕವಾಗಿ ಬಹಳ ಜನ ಸೇರಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಈ ನಿಯಮಗಳನ್ನು ನಾವು ಪಾಲನೆ ಮಾಡಬೇಕಾಗುತ್ತದೆ. ಆದರೆ ಪಾದಯಾತ್ರೆ ನಿಲ್ಲಿಸುವುದಿಲ್ಲ. ಕಾಂಗ್ರೆಸ್‌ ಪಕ್ಷ ಮೇಕೆದಾಟು ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವ ಭಯ ಬಿಜೆಪಿಗೆ ಕಾಡುತ್ತಿದೆ. ಆದ್ದರಿಂದಲೇ ಸರ್ಕಾರ ಈ ರೀತಿಯಾಗಿ ಅಡ್ಡಿ ಮಾಡುತ್ತಿದೆ.

ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಏಕೆ ಮಾಡಲಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲು ಆಗಲಿಲ್ಲ. ನಾವು ಮಾಡಲಿಲ್ಲ ಅಂದ ಮಾತ್ರಕ್ಕೆ ನೀವು ಮಾಡುವುದಿಲ್ಲವೇ? ನಿಮಗೆ ನಾವು ಸಹ ಅವಕಾಶ ಕೊಡುತ್ತಿದ್ದೇವೆ. ನೀವು ಮಾಡಿದರೆ ನಿಮಗೇ ಕ್ರೆಡಿಟ್‌ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next