ಈಗಷ್ಟೇ ಅವನು ಡಿಗ್ರಿ ಮುಗಿಸಿ ಸಣ್ಣದೊಂದು ಕೆಲಸಕ್ಕೆ ಸೇರಿದ್ದ. ಇನ್ನೂ ಚಿಗುರು ಮೀಸೆ. ಕಂಡದ್ದನ್ನೆಲ್ಲ ಆಸೆ ಪಡುವ ಹುಚ್ಚುಕೋಡಿ ಮನಸು. ಹುಡುಗಿಯರನ್ನು ಕಂಡೊಡನೆ ಅರಳುವ ಅದೇ ಕಣ್ಣುಗಳು. ಜವಬ್ದಾರಿಯುತನಾಗಿರಬೇಕೆಂದುಕೊಂಡರೂ ಲಾಸ್ಯವಾಡುವ ಹುಡುಗಾಟದ ಬುದ್ಧಿ. ಆಗಲೋ ಈಗಲೋ ದಿನಕ್ಕೊಂದಿಷ್ಟು ಬಾರಿ ನೆನಪಾಗುವ ಮನೆಮಂದಿ. ಹೀಗಿರುವಾಗಲೇ ಅವನಿಗೆ ಅಮ್ಮನಿಂದ ಅಣ್ಣನಿಗೆ ಹುಡುಗಿ ನಿಶ್ಚಯವಾದ ವಿಷಯ ತಿಳಿಯಿತು. ವಿಷಯ ಗೊತ್ತಾಗುತ್ತಿದ್ದ ಹಾಗೇ ಒಂದು ತಿಂಗಳು ಕೆಲಸಕ್ಕೆ ಬಾಯ್ ಹೇಳಿ ಅಣ್ಣನ ಮದುವೆ ತಯಾರಿಗೆ ಹೊರಟು ಬಿಟ್ಟ.
ಅಂದು ಅಣ್ಣನ ನಿಶ್ಚಿತಾರ್ಥ. ಹುಡುಗಿಯ ಮನೆತುಂಬ ಸಂಭ್ರಮ. ಅಣ್ಣನ ಕಣ್ಣುಗಳು ಅತ್ತಿಗೆಯನ್ನು ಹುಡುಕುತ್ತಿದ್ದರೆ, ತಮ್ಮನ ಕಣ್ಣುಗಳು ಮಾತ್ರ ಗಿಳಿ ಹಸಿರು ಚೂಡಿದಾರದಲ್ಲಿ ಮಿಂಚುತ್ತಿದ್ದ ಅತ್ತಿಗೆಯ ತಂಗಿಯನ್ನೇ ನೋಡುತ್ತಿತ್ತು. ಅವಳ ಮಾತು, ಮಾತಿಗೊಮ್ಮೆ ನಗು, ನಿಮಿಷಕ್ಕೊಮ್ಮೆ ಹಾರಾಡೋ ಮುಂಗುರುಳು ಇವುಗಳೆಲ್ಲವೂ ಅವನನ್ನ ಹುಚ್ಚನಂತೆ ಮಾಡುತ್ತಿದ್ದವು. ಏಕೋ ಮನಸ್ಸು ಪತಂಗದಂತಾಯಿತು. ಅವಳೊಂದಿಗೆ ಮಾತನಾಡುವ ಬಯಕೆ ಇನ್ನೊಂದೆಡೆ ಅವಳ ನಂಬರ್ ಸಿಗುವುದೇನೋ ಎಂಬ ಕಾತರ. ವಿಧಿಯಾಟ ಬಲ್ಲವರಾರು? ಧೈರ್ಯ ಮಾಡಿ ಅವಳೆದುರು ನಗು ಚೆಲ್ಲಿಯೇ ಬಿಟ್ಟ. ಅವಳಿಂದಲೂ ಒಂದು ಮುತ್ತಿನಂತಹ ಕಿರು ನಗು ಹೊರಬಂತು. ನಿಮಿಷಗಳಲ್ಲೇ ಮೊಬೈಲ್ ನಂಬರ್ ಕೂಡಾ ಅವನಿಗೆ ಸಿಕ್ಕಿತು.
ಆದರೆ ಅವಳದು ನೆಟ್‌ವರ್ಕ್ ಕೂಡಾ ಬರದ ಸಣ್ಣ ಊರು. ಮಾತು, ಮೆಸೇಜ್, ಫೋನ್, ಯಾವುದೂ ಇಲ್ಲ. ಬರಿಗಿಳಿ ಹಸಿರು ಚೂಡಿದಾರ ಆ ನಗು ಮಾತ್ರ ಅವನಿಗೆ ನೆನಪು. ಅವಳು ಮತ್ತೆ ಸಿಕ್ಕಿದ್ದು ಅಣ್ಣನ ಮದುವೆಯಲ್ಲೇ. ಅತ್ತಿಗೆಯ ಮುಂದೆ ತಿಳಿ ನೀಲಿ ಸೀರೆಯನ್ನುಟ್ಟು ನವಿಲಿನಂತೆ ಹೆಜ್ಜೆ ಹಾಕಿ ಬರುತ್ತಿದ್ದರೆ ಇವನಿಗೆ ಅವಳು ತನಗಾಗೇ ಬಂದ ಅಪ್ಸರೆಯಂತೆ ಕಾಣುತ್ತಿದ್ದಳು. ಕಣೆÅಪ್ಪೆ ಕೂಡಾ ಮಿಟುಕಿಸುವುದನ್ನು ಮರೆತು ನಿಂತವು. ಆಗಲೇ ಅವನಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿದ್ದು. ಅವನ ಮನಸ್ಸು ಅವಳ ಪ್ರೀತಿಗೆ ಅಂಗಲಾಚಿದ್ದು. ಆದರೆ ಹೇಳಿಕೊಳ್ಳಲಾಗಲಿಲ್ಲ. ಮದುವೆಯೂ ಮುಗಿಯಿತು. ಅವನ ಪ್ರೀತಿ ಮಾತ್ರ ಮನದ ಮೂಲೆಯಲ್ಲಿ ಕುಳಿತು ಬಿಕ್ಕಳಿಸುತ್ತಿತ್ತು.
ಕೆಲ ದಿನಗಳನ್ನು ಅವಳ ನೆನಪಿನಲ್ಲಿ ಕಳೆದ. ನೆನಪಿಸಿಕೊಂಡು ಪ್ರಯೋಜನಲ್ಲವೆಂದು ಎಲ್ಲಾ ಮರೆತು ವಾಸ್ತವಕ್ಕೆ ಕಾಲಿಟ್ಟ. ಒಂದು ದಿನ ಅತ್ತಿಗೆಯಿಂದ ದೂರವಾಣಿ ಕರೆ ಬಂದಿತು. ನ್ಯೂ ಇಯರ್‌ಗೆ ನನ್ನ ತಂಗಿ ಬೆಂಗಳೂರಿಗೆ ಬರುತ್ತಿದ್ದಾಳೆ; ನೀನು ಬರಲೇ ಬೇಕು ಎಂದು. ಇವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಬೆಂಗಳೂರು ಬಸ್ ಹತ್ತಿಯೇ ಬಿಟ್ಟ. ಗಿಳಿ ಹಸಿರು ಚೂಡಿದಾರ, ತಿಳಿ ನೀಲಿ ಸೀರೆ, ಆ ನಗು, ಇವೆಲ್ಲದರ ನೆನಪಿನಲ್ಲಿ ನಿದ್ದೆಗೆ ಜಾರಿದ ಅವನು ಬಸ್ ಬೆಂಗಳೂರು ತಲುಪಿದಾಗಲೇ ಎಚ್ಚರವಾಗಿದ್ದು.
ಅಣ್ಣನ ಮನೆಗೆ ಹೋಗುತ್ತಿದ್ದಂತೆ ಅತ್ತಿಗೆಯ ತಂಗಿ ಬಾವಾ ಎಂದಳು. ಅವನಿಗೆ ಆ ಪದ ಕೇಳುತ್ತಿದ್ದಂತೆ ಅವನಿಗೆ ಮನದೊಳಗೆ ಯಾರೋ ವೀಣೆ ನುಡಿಸಿದಂತಾಯಿತು. ಖುಷಿಯೋ ಖುಷಿ. ಎಲ್ಲರೂ ಸೇರಿ ಬೆಂಗಳೂರು ಸುತ್ತಿದರು. ಅವರಿಬ್ಬರಿಗೆ ತಕ್ಕ ಮಟ್ಟಿಗೆ ಸಲುಗೆಯೂ ಬೆಳೆಯಿತು. ಅವನಿಗೆ ಅವಳ ಮೇಲಿದ್ದ ಪ್ರೀತಿ ಮತ್ತೂ ಹೆಚ್ಚಾಯಿತು. ಆದರೆ ಅವಳಲ್ಲಿ ಹೇಳಲಾಗದೇ ಮರಗಟ್ಟಿ ಹೋದ. ಅವಳಿಗಾಗಿ ಬರೆದ ಮೊದಲ ಪ್ರೇಮ ಪತ್ರ ಅಂಗೈಯ ಬೆವರಿಗೆ ಒದ್ದೆಯಾಯಿತು. ಅದೇನೋ ಧೈರ್ಯ ಮಾಡಿ ಅಣ್ಣ ಅತ್ತಿಗೆಯ ಬಳಿ ವಿಷಯ ತಿಳಿಸಿದ. ಅವರಿಬ್ಬರೂ ಅವಳಿಗೆ ಇವನ ಪ್ರೀತಿಯ ವಿಚಾರ ಹೇಳಿದರು.
ಆದರೆ ಅವಳಿನ್ನು ಡಿಗ್ರಿ ಓದುತ್ತಿದ್ದಳು, ಪ್ರೀತಿ ಪ್ರೇಮ ಎಂದರೆ ಹೆದರಿಕೆ. ಆದರೂ ಅವನಲ್ಲಿ ಕಂಡ ಕಾಳಜಿ ಅಕ್ಕನೊಂದಿಗಿದ್ದ ಪ್ರೀತಿ ಬಾವನ ಮೇಲಿರುವ ಗೌರವದಿಂದ ಅವಳೂ ಒಪ್ಪಿದಳು. ಅವನ ಹಳೆಯ ಪ್ರೀತಿ ಹೊಸ ವರ್ಷದಲಿ ಅರಳಿತು. ಎಲ್ಲಾ ವರ್ಷಕ್ಕಿಂತ ಈ ವರ್ಷ ಅವನಿಗೆ ವಿಶೇಷವಾಯಿತು.
– ಕಾವ್ಯಾ ಭಟ್ಟ ಜಕ್ಕೊಳ್ಳಿ
ಪತ್ರಿಕೋದ್ಯಮ ವಿಭಾಗ,
ಎಂ.ಎಂ. ಕಾಲೇಜು, ಶಿರಸಿ.