Advertisement
ವೃತ್ತಿಪರ ಕಲಾ ತಂಡಗಳೂ ಸೇರಿದಂತೆ ಯಾವುದೇ ಕಲಾವಿದರು ಪೌರಾಣಿಕ ಪ್ರಸಂಗವೊಂದನ್ನು ಪ್ರಸಂಗ ಚೌಕಟ್ಟಿನೊಳಗೆ ಪ್ರದರ್ಶಿಸಬೇಕೆಂಬ ಬದ್ಧತೆಗೆ ಒಳಪಟ್ಟಾಗ ಮಾತ್ರವೇ ಯಾವುದೇ ಪ್ರಸಂಗ ಕಳೆಗಟ್ಟಲು ಮತ್ತು ನೈಜ ಯಕ್ಷಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಲ್ಲಿ ಕಾರಣವಾಗುತ್ತದೆ.
Related Articles
Advertisement
ಎರಡನೇ ಪ್ರಸಂಗವಾಗಿ ಪ್ರದರ್ಶನಗೊಂಡ ಮಾಗಧ ವಧೆ ಪ್ರೇಕ್ಷಕ ಸಮೂಹಕ್ಕೆ ಹೊಸ ಅನುಭವವನ್ನು ಕೊಟ್ಟಿತು. ಜನ್ಸಾಲೆ ರಾಘವೆಂದ್ರ ಆಚಾರ್ಯರ ಮಾಧುರ್ಯಭರಿತ ಕಂಠಸಿರಿ ಪ್ರಸಂಗದ ಮೆರುಗನ್ನು ಹೆಚ್ಚಿಸಿದರೆ ಅದಕ್ಕೆ ಪೂರಕವೆಂಬಂತೆ ಕಥಾ ನಾಯಕ ಮಾಗಧನ ಪಾತ್ರದಲ್ಲಿ ರಂಗದಲ್ಲಿ ಮಿಂಚು ಹರಿಸಬಲ್ಲ ವಿದ್ಯಾಧರ ಜಲವಳ್ಳಿ ಅವರು ಪ್ರವೇಶದಿಂದ ಅಂತ್ಯದವರೆಗೂ ಮಿಂಚಿನ ಸಂಚಾರವನ್ನೇ ಉಂಟುಮಾಡಿದರು. ಗತ್ತು ಗೈರತ್ತಿನ ಹೆಜ್ಜೆಗಾರಿಕೆ, ತೂಕಭರಿತ ಮಾತುಗಳು ಮತ್ತು ಜಲವಳ್ಳಿ ಶೈಲಿಯ ಆಂಗಿಕ ಅಭಿನಯದಿಂದ ರಂಗದ ಮೇಲೆ ಮಾಗಧನ ಅಮೂರ್ತ ವ್ಯಕ್ತಿತ್ವಕ್ಕೊಂದು ಮೂರ್ತ ರೂಪ ಕೊಡುವಲ್ಲಿ ಜಲವಳ್ಳಿ ಯಶಸ್ಸನ್ನು ಕಂಡರು.
ಕೃಷ್ಣನಾಗಿ ಕಡಬಾಳ ಉದಯರ ಪಾತ್ರಪೋಷಣೆ ಪ್ರಸಂಗಕ್ಕೊಂದು ಅಚ್ಚುಕಟ್ಟುತನವನ್ನು ತಂದುಕೊಟ್ಟಿತು. ಸತ್ಯಭಾಮೆಯಾಗಿ ಯಲಗುಪ್ಪ ಅವರು ತಮ್ಮ ಅಗಾಧ ಅನುಭವದ ಪ್ರಾವಿಣ್ಯತೆಯನ್ನು ಜಾಹೀರುಗೊಳಿಸಿದರು.ಹಿಮ್ಮೇಳದಲ್ಲಿ ಜನ್ಸಾಲೆಯವರಿಗೆ ಮದ್ದಳೆಯಲ್ಲಿ ಸುನೀಲ್ ಭಂಡಾರಿ ಹಾಗೂ ಚೆಂಡೆಯಲ್ಲಿ ಯುವ ಪ್ರತಿಭೆ ಸೃಜನ್ ಸೂಕ್ತ ಸಾಥ್ ನೀಡಿದರು.
ಇವೆಲ್ಲದರ ನಡುವೆ ಇಲ್ಲಿ ಪ್ರಸ್ತಾಪಿಸಲೇಬೇಕಾಗಿರುವ ಮುಖ್ಯವಾದ ಅಂಶ ಒಂದಿದೆ. ಅದೆಂದರೆ, ಸಮರ್ಥ ಕಲಾವಿದರ ತಂಡವನ್ನು ಮುನ್ನಡೆಸಲು ಸಮರ್ಥ ಯಜಮಾನನ ಅವಶ್ಯಕತೆ ಎಷ್ಟಿದೆ ಎಂಬ ಅಂಶ. ಇದಕ್ಕೆ ಸೂಕ್ತ ನಿದರ್ಶನವಾಗಿ ಸದ್ಯಕ್ಕೆ ನಮಗೆ ಕಾಣಿಸುವಂತಹ ಹೆಸರೇ ಪೆರ್ಡೂರು ಮೇಳದ ಯಜಮಾನರಾಗಿರುವ ಕರುಣಾಕರ ಶೆಟ್ಟಿಯವರ ಹೆಸರು. ಪೌರಾಣಿಕ ಪ್ರಸಂಗಗಳ ಆಳವಾದ ಜ್ಞಾನ, ನಿರ್ದೇಶನಾ ಸಾಮರ್ಥ್ಯ, ಸಂಘಟನಾ ಚತುರತೆಗಳನ್ನೆಲ್ಲಾ ತನ್ನಲ್ಲಿ ಮೇಳೈಸಿಗೊಂಡಿರುವ ವೈ ಕರುಣಾಕರ ಶೆಟ್ಟಿ ಅವರು ತನ್ನ ಮೇಳದ ಕಲಾವಿದರ ಶಕ್ತಿ ಸಾಮರ್ಥ್ಯವನ್ನು ಸಮರ್ಥವಾಗಿ ಒರೆಗೆ ಹಚ್ಚುವ ಹೆಚ್ಚುಗಾರಿಕೆಯಿಂದಲೇ ಅವರಿಂದು ಒಬ್ಬ ಸಮರ್ಥ ಯಜಮಾನರಾಗಿ ರೂಪುಗೊಂಡಿದ್ದಾರೆ.
ಮೋಹನ್ ಪೆರ್ಡೂರು