ಕಾಸರಗೋಡು: ಹಲವು ವರ್ಷಗಳ ಕನಸಾಗಿದ್ದ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಾಸರಗೋಡು ನಗರದ ಪ್ರಧಾನ ಅಂಚೆ ಕಚೇರಿಯ ಸಮುಚ್ಚಯದಲ್ಲಿ ಶನಿವಾರ ಬೆಳಗ್ಗೆ ಆರಂಭಗೊಂಡಿತು.
ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿರುವ ವ್ಯಾಪಾರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪಿ. ಕರುಣಾಕರನ್ ಅವರು ಕಾಸರಗೋಡು ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ಕುಂಞಿರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಪಿ. ರಾಘವನ್, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಹಕೀಂ ಕುನ್ನಿಲ್, ಎಂ.ಸಿ. ಖಮರುದ್ದೀನ್, ಮಾಜಿ ಶಾಸಕ ಸಿ.ಎಚ್. ಕುಂಞಂಬು ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭಗೊಂಡಿದ್ದು, ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಕಾರ್ಯಾಚರಿಸುವ ಈ ಸೇವಾ ಕೇಂದ್ರದಲ್ಲಿ ದಿನಂಪ್ರತಿ 50 ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿಕೋಟೆ ಪಾಸ್‌ಪೋರ್ಟ್ ಕೇಂದ್ರದ ಓರ್ವ ನೌಕರನ ಸಹಿತ ಇದೀಗ ಮೂರು ಮಂದಿ ನೌಕರರು ಇಲ್ಲಿ ಸೇವೆಯಲ್ಲಿದ್ದಾರೆ. ಎರಡು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ಕಳೆದ ಬುಧವಾರದಂದು ಮೊದಲ ಅರ್ಜಿಯನ್ನು ಪ್ರಾಯೋಗಿಕವಾಗಿ ಪಾಲಕುನ್ನು ತಿರುವಕ್ಕೋಳಿಯ ಶೇಖ್ ಮೆಹ್‌ವಿಸ್ ಮೂಲಕ ಸಲ್ಲಿಸಲಾಯಿತು. ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆಯಾಗುವುದರೊಂದಿಗೆ ಇಲ್ಲಿನ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.