ಬೆಂಗಳೂರು: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ನಾಡಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಧುರ ಕಂಠದ ಮೂಲಕ ದೇಶದ ಮನೆ ಮಾತಾಗಿದ್ದ ಲತಾ ಮಂಗೇಶ್ಕರ್ ಈಗ ಅವರು ಹಾಡಿ ಹೋಗಿರುವ ಗೀತೆಗಳ ಮೂಲಕ ಅಜರಾಮರರಾಗಿ ಇರಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ವ್ಯಕ್ತ ಪಡಿಸಿ ಸಪ್ತಸ್ವರಗಳ ಸಾಮ್ರಾಜ್ಯಆಗಿದ್ದ ಪ್ರಖ್ಯಾತ ಗಾಯಕರು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕತ, ಭಾರತರತ್ನ ಲತಾ ಮಂಗೇಶ್ಕರ್ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಭಾರತದ ಗಾನ ಕೋಗಿಲೆ’ ಎಂದೇ ಪ್ರಖ್ಯಾತಿ ಪಡೆದಿರುವ ಹಿರಿಯ ಗಾಯಕಿ ಲತಾ ಮಂಗೇಶ್ವರ್ ನಿಧನ ಆಘಾತ ಉಂಟು ಮಾಡಿದೆ. 13ನೇ ವಯಸ್ಸಿಗೆ ಕಲಾ ಸರಸ್ವತಿಯ ಸೇವೆ ಆರಂಭಿಸಿದ ಅವರು, ಇದುವರೆಗೂ ವಿವಿಧ ಭಾಷೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿಕೊಂಡು ನಾವು ಬೆಳೆದಿದ್ದೇವೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಅವರ ನಿಧನ ಗಾಯನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಸಚಿವರಾದ ಸಚಿವರಾದ ಡಾ| ಸಿ.ಎನ್.ಅಶ್ವತ್ಥನಾರಾಯಣ, ವಿ.ಸೋಮಣ್ಣ, ಗೋಪಾಲಯ್ಯ, ಆರ್.ಅಶೋಕ್, ವಿ.ಸೋಮಣ್ಣ, ಗೋಪಾಲಯ್ಯ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.