ಸಾಗರ: ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆ ಅಭಿವೃದ್ಧಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದ್ದು, ಇದನ್ನು ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆ ಸಚಿವರು ಚಿಂತನೆ ನಡೆಸಿದ್ದಾರೆ. ಕೆರೆ ಅಭಿವೃದ್ಧಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಸಾರ್ವಜನಿಕರು ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಗಣಪತಿ ಕೆರೆ, ಸಣ್ಣಮನೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗಣಪತಿ ಕೆರೆಯನ್ನು ಪುನರ್ ಸರ್ವೇ ಮಾಡಿಸುವತ್ತ ಗಮನ ಹರಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಣ ವ್ಯಯ ಮತ್ತು ದುರುಪಯೋಗವಾಗಿರುವ ಗುಮಾನಿಗಳಿವೆ. ಕೆರೆ ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 206 ಚತುಷ್ಪಥ ರಸ್ತೆಯ ಅಭಿವೃದ್ಧಿ ಯೋಜನೆಗೆ ಸುಮಾರು ೪೫ ಕೋಟಿ ರೂ. ಹೆಚ್ಚುವರಿಯಾಗಿ ಮಂಜೂರಾಗಿದ್ದು ರಸ್ತೆಯ ವಿಭಜಕದಲ್ಲಿ 0.9 ಮೀಟರ್ ಮೆರಿಡಿಯನ್ ನಿರ್ಮಾಣ ಮಾಡಲಾಗುವುದು. ಯೋಜನೆಯಡಿ ಸಣ್ಣಮನೆ ಸೇತುವೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯರು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದು ಶೀಘ್ರದಲ್ಲಿಯೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಹಿಂದಿನ ಶಾಸಕರು ತಮ್ಮ ಗೂಂಡಾಗಳ ಮೂಲಕ ಭೂಸ್ವಾಧೀನಕ್ಕೆ ಮುಂದಾಗಿದ್ದರು. ನಾನು ಸ್ನೇಹದಿಂದ ಅವರ ಬಳಿ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಕೋರಿದ್ದು ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
3 ಕೋಟಿ ರೂ. ವೆಚ್ಚದಲ್ಲಿ ಬೈಪಾಸ್ ನಿರ್ಮಾಣ, ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ 3 ಕೋಟಿ ರೂ., ಸಾಗರದ ಜೈಲಿನ ಕಾಂಪೌಂಡ್ ಉನ್ನತೀಕರಣಕ್ಕೆ 1.33 ಕೋಟಿ ರೂ. ಮಂಜೂರಾಗಿದೆ. ಗ್ರಾಮಾಂತರ ಶಾಲೆಗಳಿಗೆ ಪೀಠೋಪಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1.99 ಕೋಟಿ ರೂ. ಅನುದಾನ ಮಂಜೂರಾಗಿದೆ. ಸಾಗರ ಅಗ್ರಹಾರದಿಂದ ಹೆಗಡೆ ಫಾರ‍್ಮ್‌ವರೆಗೆ ಹೊಸನಗರ ರಸ್ತೆಯ ಅಗಲೀಕರಣಕ್ಕೆ ಆರು ಕೋಟಿ ರೂ. ಬಿಡುಗಡೆಯಾಗಿದೆ. ಸಾಗರ ನಗರದ ಕೆಳದಿ ರಾಣಿ ಚೆನ್ನಮ್ಮ ವೃತ್ತದಿಂದ ಶ್ರೀಗಂಧ ಕಾಂಪ್ಲೆಕ್ಸ್‌ವರೆಗೆ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗುತ್ತದೆ. ಚೆನ್ನಮ್ಮ ವೃತ್ತದಲ್ಲಿ ಕೆಳದಿ ರಾಣಿ ಚೆನ್ನಮ್ಮ ವಿಗ್ರಹವನ್ನು ಸ್ಥಾಪಿಸುವ ಚಿಂತನೆ ಇದೆ. ಈ ರಸ್ತೆಯನ್ನು ಯಾವುದೇ ತೆರವು ಪ್ರಕ್ರಿಯೆ ನಡೆಸದೆ ಚರಂಡಿ ಮೊದಲಾದ ಅಭಿವೃದ್ಧಿ ಕೆಲಸ ನಡೆಯಲಿದೆ ಎಂದರು.
ಹೊಸನಗರದ ಕುಡಿಯುವ ನೀರಿನ ಯೋಜನೆಗೆ 290 ಕೋಟಿ ರೂ. ಮಂಜೂರಾಗಿದ್ದು, ಗುತ್ತಿಗೆದಾರರ ನೇಮಕ ಆಗಿ ಈಗಾಗಲೇ ಕೆಲಸ ಆರಂಭವಾಗಿದೆ. ಎಂಎಡಿಬಿಯಿಂದ 32 ಲಕ್ಷ ಅಭಿವೃದ್ಧಿ ಕೆಲಸಕ್ಕೆ ಬಿಡುಗಡೆಯಾಗಿದೆ. ಎನ್‌ಎಚ್‌ನಲ್ಲಿ ಹಿಂದಿನ ಅವಧಿಯಲ್ಲಿ ಹಾಕಲಾಗಿರುವ ಕಳಪೆ ಗುಣಮಟ್ಟದ ದೀಪಗಳನ್ನು ತೆಗೆದು, ಹೊಸ ಮಾದರಿಯ ವಿದ್ಯುತ್ ಕಂಬ ಹಾಕುವುದು, ಮುಖ್ಯವಾಗಿ ಸುರಕ್ಷತೆಗೆ ಆದ್ಯತೆ ನೀಡಿ ರಸ್ತೆ ಕಾಮಗಾರಿ ಮುಗಿಸಲು ತೀರ್ಮಾನಿಸಲಾಗಿದ್ದು, ಗುತ್ತಿಗೆದಾರರೊಂದಿಗೂ ಸಭೆ ನಡೆಸಿದ್ದೇನೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ರಾಜ್ಯದಲ್ಲಿ ವಿವಿಧ ಯೋಜನೆಗಳಿಗಾಗಿ ಸರ್ಕಾರ 32 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಆರಂಭದಲ್ಲಿ ಸ್ವಲ್ಪ ಅಭಿವೃದ್ಧಿ ಹಿನ್ನೆಡೆ ಉಂಟಾಗಿದ್ದರೂ ಈಗ ಸರ್ಕಾರ ಸಮಗ್ರ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಸಾಗರಕ್ಕೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗಣಪತಿ ಮಂಡಗಳಲೆ, ಸುರೇಶಬಾಬು, ರೇಖಾ, ಟಿ.ಪಿ. ರಮೇಶ್, ಲಿಂಗರಾಜ್ ಆರೋಡಿ, ಮಂಜು ಬೆಳಲಮಕ್ಕಿ, ನಾರಾಯಣಪ್ಪ, ಶ್ರೀಧರ್ ಪಟೇಲ್, ಚಂದ್ರಶೇಖರ್ ಕಂಬಳಿಕೊಪ್ಪ, ಬಸವರಾಜ್ ಕುಗ್ವೆ, ಯಶವಂತ ಫಣಿ, ಆಟೋ ದಿನೇಶ್, ರವಿಕುಮಾರ್ ವೈ.ಕೆ. ಇನ್ನಿತರರು ಹಾಜರಿದ್ದರು.