ಬನಹಟ್ಟಿ: ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿ ಕಳೆದ ಒಂದು ತಿಂಗಳಿಂದ ಖಾಲಿಯಾಗಿ ಭಣಗುಡುತ್ತಿತ್ತು. ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದ ಹಲವು ಜಲಾಶಯಗಳಿಂದ ಹರಿ ಬಿಟ್ಟ ನೀರು ನದಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ
ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಒಂದು ತಿಂಗಳಿಂದ ಅವಳಿ ನಗರದ ಜನರು ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ನಗರಸಭೆ ಅಧಿ ಕಾರಿಗಳು ನಗರಸಭೆ ವ್ಯಾಪ್ತಿಯ ನಾಲ್ಕೂ ನಗರಗಳಲ್ಲಿನ ಅನೇಕ ತೆರೆದ ಬಾವಿ ಹಾಗೂ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು.
ಆದರೆ ಕಳೆದ ಎರಡು ಮೂರು ದಿನಗಳಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅವಳಿ ನಗರಕ್ಕೆ ಕುಡಿಯುವ ನೀರು ಕೂಡಾ ಸರಬರಾಜಾಗುತ್ತಿದೆ. ಇದರಿಂದ ಜನರ ಸಂಪೂರ್ಣ ಖುಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ ಈಗಿನಿಂದಲೇ ಪೂರ್ವ ತಯಾರಿ ಮಾಡಬೇಕಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ಒಳಹರಿವು 2700 ಕ್ಯೂಸೆಕ್ ಇದ್ದು, ಹೊರ ಹರಿವು 2600 ಕ್ಯೂಸೆಕ್‌ನಷ್ಟಿದೆ. ಜಲಾಶಯದಲ್ಲಿ ನೀರಿನ ಮಟ್ಟ 517 ಮೀ ಇದ್ದು, ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ-35 ಮಿಮೀ, ನೌಜಾ-37 ಮಿಮೀ, ಮಹಾಬಳೇಶ್ವರ – 62 ಮಿಮೀ, ವಾರಣಾ -25 ಮಿಮೀ, ರಾಧಾನಗರಿ -114 ಮಿಮೀ, ಧೂದಗಂಗಾ -95 ಮಿಮೀ, ಸಾಂಗಲಿ-5 ಮಿಮೀ ನಷ್ಟು ಮಳೆಯಾದ ವರದಿಯಾಗಿದೆ ಎಂದು ತಹಶೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.