ಶ್ರೀಲಂಕೆಯ ದೋಲುಕಂಡ ಪ್ರದೇಶ, ಆಯುರ್ವೇದ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ತಾಣ. ಈ ಕುರಿತು ಸ್ಥಳೀಯರು ಹೇಳುವ ಕಥೆಯೇ ಬೇರೆ. ಸೈನ್ಯದಲ್ಲಿ ಆಘಾತಕ್ಕೊಳಗಾದ ರಾಮನ ಸೇನೆಯ ಶುಶ್ರೂಷೆಗಾಗಿ ಹನುಮಂತ, ಸಂಜೀವಿನಿ ಪರ್ವತವನ್ನು ಹೊತ್ತು ತಂದ. ಹಾಗೆ ತರುವಾಗ ಪರ್ವತದ ತುಂಡುಗಳು ಲಂಕೆಯಲ್ಲಿ ಐದು ಕಡೆ ಬಿದ್ದವು…
ಮಾಯಾಮೃಗದ ಆಮಿಷಕ್ಕೊಳಗಾಗಿ ಹಠ ಹಿಡಿದ ಸೀತೆಯನ್ನು, ವೇಷ ಬದಲಿಸಿ ಬಂದ ರಾವಣಾಸುರ ಅಪಹರಿಸಿ ಲಂಕೆಗೆ ಕರೆತಂದಿದ್ದ. ರಾವಣನ ಸೆರೆಯಿಂದ ತನ್ನ ಪ್ರಿಯಪತ್ನಿಯನ್ನು ಬಿಡಿಸುವ ಸಲುವಾಗಿ ರಾಮಸೇತುವಿನ ಮೂಲಕ ಶ್ರೀಲಂಕೆಗೆ ಕಾಲಿಟ್ಟ ರಾಮನ ಜತೆಯಲ್ಲಿ ಅಪಾರ ಸಂಖ್ಯೆಯ ನರ ಮತ್ತು ವಾನರ ಸೇನೆಯಿತ್ತು. ಪುಟ್ಟ ದ್ವೀಪ ರಾಷ್ಟ್ರದ ತುಂಬೆಲ್ಲಾ ಸೈನಿಕರು ಅಲ್ಲಲ್ಲಿ ಗುಂಪುಗುಂಪಾಗಿ ನೆಲೆಸಿದರು.
ನೀಲಾವರಿ: ಲಂಕೆಯ ಉತ್ತರ ಭಾಗದಲ್ಲಿ ಒಣ ಭೂಮಿಯಿದ್ದು, ಅಲ್ಲಿ ನೆಲೆನಿಂತ ಸೈನ್ಯಕ್ಕೆ ಕುಡಿವ ನೀರಿನ ತೀವ್ರ ಅಭಾವ ಉಂಟಾಗಿತ್ತು. ಇದನ್ನರಿತ ರಾಮ, ಮಾಯಾ ಬಾಣವನ್ನು ನೆಲಕ್ಕೆ ಹೂಡಿ ನೀರು ಚಿಮ್ಮಿಸಿದನಂತೆ. ಈಗಲೂ ಇಲ್ಲೊಂದು ಬೃಹತ್ ಪ್ರಾಕೃತಿಕ ನೀರಿನ ಬಾವಿ ಇದ್ದು, ಎಂಥ ಬರಗಾಲದಲ್ಲೂ ಬತ್ತಿಲ್ಲ. ಜನರು ಈ ನೀರನ್ನು ಪವಿತ್ರ ಎಂದೇ ಭಾವಿಸುತ್ತಾರೆ. ಜಾಫಾ°ದಿಂದ 14 ಕಿ.ಮೀ. ದೂರದಲ್ಲಿರುವ ಪುಟ್ಟುರ್‌ನಲ್ಲಿ ಈ ಬಾವಿ ಇದೆ.
ಯುದಗನವ: ರಾಮ- ರಾವಣರ ನಡುವಿನ ಭೀಕರ ಕದನ ನಡೆದ ಸ್ಥಳವಿದು. ಈಗಿನ ವಸಮುವ ರಾಷ್ಟ್ರೀಯ ಉದ್ಯಾನವನದಲ್ಲಿರುವ ಈ ಭೂಮಿ ಬರಡಾಗಿದೆ. ಇಲ್ಲಿನ ಮಣ್ಣಿನಲ್ಲಿ ವಿಷಕಾರಿ ಭಾರಲೋಹಗಳ ಅಂಶ ಅಧಿಕವಿದ್ದು, ಯಾವುದೇ ರೀತಿಯ ಸಸ್ಯ ಬೆಳೆಯುವುದಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿರುವ ದುನುವಿಲಾದಿಂದ ರಾಮನು ರಾವಣನ ಮೇಲೆ ಶಕ್ತಿಶಾಲಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ ಎನ್ನಲಾಗುತ್ತದೆ.
ದೋಲುಕಂಡ: ರಾವಣನ ಸೈನ್ಯದ ಅಸಾಮಾನ್ಯ ಶಕ್ತಿಯ ಬಗ್ಗೆ ರಾಮಾಯಣದಲ್ಲಿ ಬಹಳ ಚೆಂದದ ವರ್ಣನೆಗಳಿವೆ. ಯುದ್ಧ ನಡೆಯುತ್ತಿದ್ದಾಗ ಲಕ್ಷ್ಮಣನು ಗಾಯಗೊಂಡು ಪ್ರಜ್ಞಾಹೀನನಾದ. ಸೈನ್ಯದಲ್ಲಿ ಹಾಹಾಕಾರವೆದ್ದಿತು. ಅಲ್ಲಿನವರ ಶುಶ್ರೂಷೆಗೆ ಹಿಮಾಲಯದಿಂದ ಸಂಜೀವಿನಿವನ್ನು ತರುವುದು ಅನಿವಾರ್ಯವಾಗಿತ್ತು. ಹನುಮ, ಕೂಡಲೇ ಹಿಮಾಲಯದತ್ತ ಹಾರಿದ. ಆದರೆ, ಸಮಯದ ಅಭಾವದಿಂದ ನಿಖರವಾಗಿ ಸೂಕ್ತ ಮೂಲಿಕೆ ಗುರುತಿಸಲು ಸಾಧ್ಯ ಆಗಲಿಲ್ಲ.
ಸಂಶಯವೇ ಬೇಡ ವೆಂದು ಇಡೀ ಪರ್ವತವನ್ನೇ ಹೊತ್ತು ಲಂಕೆಗೆ ಹಾರಿದ. ಪರ್ವತದ ತುಂಡುಗಳು ಲಂಕೆಯಲ್ಲಿ ಐದು ಕಡೆ ಬಿದ್ದವು. ಅವುಗಳಲ್ಲೊಂದು ದೋಲುಕಂಡ. ಇಲ್ಲಿ ಆಯುರ್ವೇದದ ಔಷಧೀಯ ಸಸ್ಯಗಳು ಹೇರಳವಾಗಿರಲು ಇದೇ ಕಾರಣ ಎನ್ನಲಾಗುತ್ತದೆ. ದೋಲುಕಂಡ, ಕುರುನೆಗಲ ಜಿಲ್ಲೆಯಿಂದ 20 ಕಿ.ಮೀ. ದೂರದಲ್ಲಿದೆ.
ದಿವುರುಂಪೊಲ: ರಾವಣ ಅಳಿದ, ರಾಮ ವಿಜಯಿಯಾದ. ಸೀತೆ ಬಂಧಮುಕ್ತೆಯಾದಳು. ಆದರೆ, ರಾಮ ಆಕೆಯನ್ನು ಸ್ವೀಕರಿಸುವ ಮೊದಲು ಅಗ್ನಿಪರೀಕ್ಷೆಗೆ ಒಳಗಾಗಿ ಪಾವಿತ್ರತೆ ನಿರೂಪಿಸಬೇಕೆಂದ. ಸೀತೆ ಅಗ್ನಿಯೊಳಗೆ ಪ್ರವೇಶಿಸುತ್ತಿದ್ದಂತೆ ಅಗ್ನಿದೇವ ಪ್ರತ್ಯಕ್ಷನಾಗಿ, ಈಕೆ ಪರಿಶುದ್ಧಳು ಎಂದು ರಾಮನಿಗೆ ಒಪ್ಪಿಸಿದ.
ಇದು ತನ್ನ ಸಲುವಾಗಿ ಅಲ್ಲ, ಜಗತ್ತಿಗೇ ಆಕೆಯ ಮಹಿಮೆ ಅರಿವಾಗುವ ಸಲುವಾಗಿ ಎಂದು ರಾಮ ಸ್ಪಷ್ಟನೆ ನೀಡಿದ. ರಾಮಾಯಣದ ಈ ಪ್ರಸಂಗ ನಡೆದಿದ್ದು, ದಿವುರುಂಪೊಲದಲ್ಲಿ (ಪ್ರಮಾಣದ ಕಟ್ಟೆ). ಇಂದಿಗೂ ಪ್ರಮಾಣಗಳನ್ನು ಪರಿಶೀಲಿಸುವ ನ್ಯಾಯ ಸ್ಥಾನವಾಗಿ ಈ ಸ್ಥಳ ಪ್ರಸಿದ್ಧಿ ಹೊಂದಿದೆ. ಈ ಸ್ಥಳ, ಸೀತೆಯಿದ್ದ ಅಶೋಕವಾಟಿಕಾದಿಂದ 15 ಕಿ.ಮೀ. ದೂರದಲ್ಲಿದೆ.
* ಡಾ.ಕೆ.ಎಸ್. ಚೈತ್ರಾ