ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ತೆರಳಿದ ನಂತರ ಸಲ್ಲಿಸಿರುವ ರಾಜೀನಾಮೆ ಅಂಗೀಕರಿಸಿರುವುದಾಗಿ ಶ್ರೀಲಂಕಾ ಸಂಸತ್ ಸ್ಪೀಕರ್ ತಿಳಿಸಿದ್ದು, ಏಳು ದಿನದೊಳಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಚಾಲಕನ ಬಳಿ ಹಣವಿಲ್ಲವೆಂದು ವಾಹನ ಸುಟ್ಟು ಹಾಕಿ ವಿಕೃತಿ ಮೆರದ ಪುಂಡರು
ಶ್ರೀಲಂಕಾದಿಂದ ಪರಾರಿಯಾಗಿರುವ ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ಕಾನೂನು ಪ್ರಕಾರವಾಗಿ ರಾಜೀನಾಮೆ ನೀಡಿದ್ದು, ಇದು ಗುರುವಾರದಿಂದಲೇ ಅನ್ವಯವಾಗಲಿದೆ ಎಂದು ಲಂಕಾ ಸ್ಪೀಕರ್ ಮಹೀಂದ ಯಾಪಾ ಅಬೆಯವರ್ದನಾ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮಾಲ್ಡೀವ್ಸ್ ನಲ್ಲಿದ್ದ ಗೊಟಬಯ ರಾಜಪಕ್ಸ ವಿಶೇಷ ವಿಮಾನದ ಮೂಲಕ ಸಿಂಗಾಪುರಕ್ಕೆ ತೆರಳಿದ್ದು, ಅಲ್ಲಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಲಂಕಾ ಸಂಸತ್ ನಲ್ಲಿ ರಾಜಕೀಯ ಬಿಕ್ಕಟ್ಟಿನ ಕುರಿತು ಸರ್ವ ಪಕ್ಷಗಳ ಸಭೆ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ತೀವ್ರ ಸ್ವರೂಪ ತಾಳುತ್ತಿದ್ದಂತೆಯೇ ಗೊಟಬಯ ಲಂಕಾದಿಂದ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದರು.
1978ರಿಂದ ಶ್ರೀಲಂಕಾದ ಸರ್ಕಾರದಲ್ಲಿ ಅಧ್ಯಕ್ಷರ ಆಡಳಿತ ವ್ಯವಸ್ಥೆ ಜಾರಿಗೊಂಡ ನಂತರ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ಮೊದಲ ಅಧ್ಯಕ್ಷರಾಗಿದ್ದಾರೆ ಎಂದು ವರದಿ ತಿಳಿಸಿದೆ.