Advertisement
ಲ್ಯಾಂಡ್ ಲಿಂಕ್ಸ್‌ನ ಒಂದನೇ ಮುಖ್ಯರಸ್ತೆ, ಫ್ಯಾನ್ಸಿ ಅಂಗಡಿಯೊಂದರ ಬಳಿ ಹಲವು ಸಮಯದಿಂದ ಬೃಹತ್ ಗಾತ್ರದ ಗುಂಡಿ ಬಿದ್ದಿತ್ತು. ಹಲವು ಮಂದಿ ದ್ವಿಚಕ್ರ ಸವಾರರು ಈ ಗುಂಡಿ ಬಿದ್ದು ಗಾಯಗೊಂಡಿದ್ದರು. ವಾಹನಗಳು ಕೂಡ ಸ್ಕಿಡ್ ಆಗುವ ಅಪಾಯ ಇತ್ತು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರೂ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳೇ ಸೇರಿ ರವಿವಾರ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಈ ರಸ್ತೆಯ ಉಳಿದ ಕಡೆ ಇರುವ ಗುಂಡಿಯನ್ನೂ ಮುಚ್ಚುವ ಯೋಜನೆಯಲ್ಲಿದ್ದಾರೆ. ಸ್ಥಳೀಯ ರಾದ ಅಶೋಕ, ಹಿಮಕರ, ಸುನೀಲ್ ಹಯವದನ, ಶರವಣ ಮತ್ತು ರಘುರಾಮ ಅವರು ಈ ಕೆಲಸದಲ್ಲಿ ಸಹಕರಿಸಿದ್ದಾರೆ.
ಸ್ಥಳೀಯರಾದ ಅಶೋಕ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ರಸ್ತೆಯಲ್ಲಿದ್ದ ಹೊಂಡದಿಂದಾಗಿ ತುಂಬಾ ಸಮಸ್ಯೆ ಉಂಟಾಗುತ್ತಿತ್ತು. ಅಪಘಾತದ ಆತಂಕವೂ ಇದೆ. ಜನಪ್ರತಿನಿಧಿಗಳ ಸ್ಪಂದನೆ ಇಲ್ಲದ ಕಾರಣ ನಾವೇ ತಂಡ ಕಟ್ಟಿ ಗುಂಡಿ ಮುಚ್ಚಿದ್ದೇವೆ. ನಾವು ಒಂದೊಂದು ವೃತ್ತಿಯಲ್ಲಿದ್ದು, ರಜಾ ದಿನಗಳಲ್ಲಿ ಈ ಕೆಲಸದಲ್ಲಿ ತೊಡಗುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳೀಯರು ನಮಗೆ ಸಾಥ್ ನೀಡುವ ನಿರೀಕ್ಷೆ ಇದೆ. ಅದೇ ರೀತಿ. ಪ್ಲಾಸ್ಟಿಕ್ ಮುಕ್ತ ಲ್ಯಾಂಡ್‌ಲಿಂಕ್ಸ್ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲು ಚಿಂತನೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.