Advertisement

ಲ್ಯಾಂಡ್‌ಲೈನ್‌: ದೂರುಗಳಿವೆ, ಕೇಳುವವರೇ ಇಲ್ಲ…

06:00 AM Nov 26, 2018 | |

ಇಡೀ ಜಗತ್ತು ಮೊಬೈಲ್‌ ಫೋನ್‌ಗಳ ಹಿಂದೆ ಬಿದ್ದಿದೆ ಎಂಬುದು ಕಣ್ಣೆದುರಿನ ಸತ್ಯ ಹಾಗಿದ್ದೂ, ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಲ್ಯಾಂಡ್‌ಲೈನ್‌ನ ಫೋನ್‌ ಬೇಡಿಕೆ ಇದ್ದೇ ಇದೆ. ಗ್ರಾಹಕರು ಕೇಳಿದಂಥ ಸೇವೆ ಒದಗಿಸಲು ಉಳಿದ ದೇಶಗಳೆಲ್ಲಾ ನಿಯಮ ರೂಪಿಸಿವೆ. ನಮ್ಮಲ್ಲಿ, ಲ್ಯಾಂಡ್‌ಲೈನ್‌ ಫೋನ್‌ಗಳಿವೆ. ಗ್ರಾಹಕರೂ ಇದ್ದಾರೆ. ದೂರುಗಳೂ ಸಾವಿರ ಸಾವಿರ ಇವೆ. ಆದರೆ, ಅವುಗಳನ್ನು ಕೇಳುವವರೇ ಇಲ್ಲ….

Advertisement

ದಿನದಿಂದ ದಿನಕ್ಕೆ ಭಾರತದಲ್ಲಿ ದೂರವಾಣಿ ಸಾಂದ್ರತೆ ಹೆಚ್ಚುತ್ತಿದೆ. ಆದರೆ ಗುಣಮಟ್ಟದ ಕರೆ ವಿಷಯ ಬಂದಾಗ ಭಾರತದ ಚಂದಾದಾರರ ಸಮಸ್ಯೆ ಬಿಗಡಾಯಿಸುತ್ತಿದೆ. ಹಾಗಿದ್ದೂ,  ಜನರ ಗೊಣಗಾಟ ಕಡಿಮೆಯಾಗುತ್ತಿದೆ. ಏಕೆಂದರೆ ಭಾರತೀಯರು ಈ ಸಮಸ್ಯೆಗಳನ್ನು ಜೀವನದ ಒಂದು ಅಂಗ ಎಂದುಕೊಂಡುಬಿಟ್ಟಿದ್ದಾರೆ! ಹಾಗಾಗಿ ಸಿಗ್ನಲ್‌ ಸಿಗದಿದ್ದರೆ, 30 ಸೆಕೆಂಡ್‌ನ‌ಲ್ಲಿ ಕರೆ ಸಂಪರ್ಕ ಆಗದಿದ್ದರೆ, ಪದೇ ಪದೆ ಕಾಲ್‌ ಡ್ರಾಪ್‌ ಆದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಭಾರತದ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಕೆಲ ದಿನಗಳ ಹಿಂದೆ ವಿಶ್ವದ ಹತ್ತಾರು ದೇಶಗಳ ಟೆಲಿಕಾಂ ವ್ಯವಸ್ಥೆಗಳನ್ನು ವಿಷಧವಾಗಿ ಪರಿಶೀಲಿಸಿ ಒಂದು ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ. ಸಂಪೂರ್ಣ ವರದಿ ಬೇಕಾದವರು ಟ್ರಾಯ್‌ ವೆಬ್‌ನ ಈ ಲಿಂಕ್‌ನಲ್ಲಿ ವರದಿಯನ್ನು ತಮ್ಮದಾಗಿಸಿಕೊಳ್ಳಬಹುದು,https://www.trai.gov.in/news-updates/telecommunications-select-countries-policies-statistics ಆ ವರದಿಯಿಂದ ಆಯ್ದ ಕೆಲವು ಅಂಶಗಳು ಈ ವಾರ ನಮಗೆ ಸರಕು.

ಸಂತೃಪ್ತ ಪಾಕದಲ್ಲಿನ ಸಕ್ಕರೆ!
2016ರವರೆಗಿನ ಅಂಕಿಅಂಶಗಳನ್ನು ಈ ವರದಿ ಆಧರಿಸಿದೆ. ಆ ನಂತರವೂ ಪರಿಸ್ಥಿತಿ ಯಥಾವತ್ತಾಗಿ ಮುಂದುವರೆದಿರುವುದರಿಂದ ಅಂಕಿಸಂಖ್ಯೆಗಳಲ್ಲಿ ವ್ಯತ್ಯಾಸ ಕಾಣಬಹುದೇ ವಿನಃ ತರ್ಕಗಳಲ್ಲಲ್ಲ. ವಿಶ್ವದಲ್ಲೀಗ ಟೆಲಿ ಡೆನ್ಸಿಟಿ ಶೇ. 101.5ರಷ್ಟಿದೆ. ಅಂದರೆ, 100 ಜನರಿಗೆ 101.5ರಷ್ಟು ದೂರವಾಣಿ ಸೌಲಭ್ಯವಿದೆ ಎಂದು ಅಂದುಕೊಳ್ಳಬಹುದು. 2013ರಲ್ಲಿ ಈ ಸಾಂದ್ರತೆ ಕೇವಲ ಶೇ. 93.1ರಷ್ಟಿತ್ತು. ಸಂತೃಪ್ತ ಸ್ಥಿತಿಗೆ ತಲುಪಿದ ನಂತರ ಸಾಂದ್ರತೆ ಏರುವುದು ವಿರಳ ಎಂಬ ಲೆಕ್ಕದಲ್ಲಿ ಟೆಲಿಕಾಂ ಕ್ಷೇತ್ರದ ವಿಸ್ತಾರ ಗಮನಾರ್ಹ. ಸಂತೃಪ್ತ ಸ್ಥಿತಿಗೆ ತಲುಪಿದ ಸಕ್ಕರೆ ಪಾಕಕ್ಕೆ ಇನ್ನಷ್ಟು ಸಕ್ಕರೆ ಹಾಕಿ ಕರಗಿಸುವುದು ಸುಲಭವೇ?

ಚೀನಾ, ಜನಸಂಖ್ಯೆಗೆ ಅನುಗುಣವಾಗಿ ಟೆಲಿಕಾಂ ಚಂದಾದಾರರ ಸಂಖ್ಯೆಯಲ್ಲೂ ಭಾರತವನ್ನು ಹಿಂದಿಕ್ಕಿದೆ. ಅಲ್ಲಿ 1,364.9 ಮಿಲಿಯನ್‌ ಗ್ರಾಹಕರಿದ್ದರೆ ಭಾರತಕ್ಕೆ ದ್ವಿತೀಯ ಸ್ಥಾನ, ನಮ್ಮಲ್ಲಿನ ಗ್ರಾಹಕರ ಸಂಖ್ಯೆ 1,127.37 ಮಿಲಿಯನ್‌. ವಿಶ್ವದ 7,511 ಮಿಲಿಯನ್‌ ಚಂದಾದಾರರಲ್ಲಿ ಕೇವಲ 5.8 ಮಿಲಿಯನ್‌ ಗ್ರಾಹಕರನ್ನು ಹೊಂದಿರುವ ನ್ಯೂಜಿಲ್ಯಾಂಡ್‌, 23 ದೇಶಗಳ ಅಧ್ಯಯನ ಪಟ್ಟಿಯಲ್ಲಿ ಕೆಳ ಸ್ಥಾನ ಪಡೆದಿದೆ. ಬ್ರಿಜಿಲ್‌, ಜರ್ಮನಿ, ಇಟಲಿ, ಮಲೇಶಿಯಾ, ಪಿಲಿಫೈನ್ಸ್‌, ದಕ್ಷಿಣ ಆಫ್ರಿಕಾ, ಯುಕೆಗಳಲ್ಲಿ ಗ್ರಾಹಕರ ಸಂಖ್ಯೆ ಕುಸಿಯುತ್ತಿರುವುದು ಸ್ವಾರಸ್ಯ. ಬ್ರೆಜಿಲ್‌ನಲ್ಲಿ 2015ರಲ್ಲಿ ಶೇ. 8.16ರಷ್ಟು ಗ್ರಾಹಕರ ಸಂಖ್ಯೆ ಕುಸಿದರೆ ಮರುವರ್ಷ ದಕ್ಷಿಣ ಆಫ್ರಿಕಾದಲ್ಲಿ 12.89ರಷ್ಟು ಚಂದಾದಾರರು ಕಾಣೆಯಾದರು! 

ನಿಜ, ಭಾರತ, ಚೀನಾಗಳಲ್ಲಿ 500 ಮಿಲಿಯನ್‌ಗಿಂತ ಜಾಸ್ತಿ ಗ್ರಾಹಕರಿದ್ದರೆ ಯುಎಸ್‌ಎ, ಇಂಡೋನೇಷಿಯಾ, ಬ್ರಿಜೆಲ್‌, ರಷ್ಯಾ, ಜಪಾನ್‌, ನೈಜೀರಿಯಾ, ಪಾಕಿಸ್ತಾನ, ಫಿಲಿಫೈನ್ಸ್‌, ಮೆಕ್ಸಿಕೋಗಳಲ್ಲಿ 100 ಮಿಲಿಯನ್‌ ದಾಟಿದ ಚಂದಾದಾರರಿದ್ದಾರೆ. ಟೆಲಿಡೆನ್ಸಿಟಿಯ ವಿಚಾರ ಬಂದರೆ, ರಷ್ಯಾದ ದೂರವಾಣಿ ಸಾಂದ್ರತೆ ಶೇ. 163.26, ಇಂಡೋನೇಷಿಯಾದ್ದು ಶೇ. 149.13 ಹಾಗೂ ದಕ್ಷಿಣ ಆಫ್ರಿಕಾದ್ದು ಶೇ. 142.38. 16 ದೇಶಗಳಲ್ಲಿ ಶೇ. 100ರ ಸಾಂದ್ರತೆ ಮೀರಿದ ಸಾಧನೆಯಾಗಿದ್ದರೆ ಭಾರತ 2015ರಲ್ಲಿ ಕಂಡಿರುವ ಶೇ. 79.82ರ ಅಭಿವೃದ್ಧಿ ಇನ್ನಷ್ಟು ಸಾಧ್ಯ ಎಂಬುದನ್ನೇ ಮಂಡಿಸಿದೆ. 

Advertisement

ಇನ್ನೂ ಇದೆ ಲ್ಯಾಂಡ್‌ಲೈನ್‌!
ಸ್ಥಿರ ದೂರವಾಣಿಯ ವಿಚಾರದಲ್ಲಿ ಕೆಲವು ಕಣ್ಣು ಸೆಳೆಯುವ ಅಂಶಗಳು ಕಾಣುತ್ತವೆ. 2013ರಲ್ಲಿ 1,142 ಮಿಲಿಯನ್‌ ಇದ್ದ ಲ್ಯಾಂಡ್‌ಲೈನ್‌ 16ರ ವೇಳೆಗೆ 1,004 ಮಿಲಿಯನ್‌ಗೆ ಇಳಿದಿದೆ. ಇದರಲ್ಲೂ ಚೀನಾಕ್ಕೆ ಮೊದಲ ಸ್ಥಾನ. ಆದರೆ ನಾಲ್ಕು ವರ್ಷಗಳಲ್ಲಿ ಅದರ ಸ್ಥಿರ ಗ್ರಾಹಕರ ಸಂಖ್ಯೆ 249.43 ಮಿಲಿಯನ್‌ನಿಂದ 206.62 ಮಿಲಿಯನ್‌ಗೆ ಇಳಿದಿದೆ. ಇದನ್ನು ಹೊರತುಪಡಿಸಿದರೆ ಮಿಲಿಯನ್‌ ಲೆಕ್ಕದಲ್ಲಿ ಯುಎಸ್‌ಎ, ಜಪಾನ್‌, ಜರ್ಮನಿ ಹಾಗೂ ಬ್ರಿಜಿಲ್‌ನಲ್ಲಿ ಹೆಚ್ಚು ಸ್ಥಿರ ದೂರವಾಣಿ ಗ್ರಾಹಕರಿದ್ದಾರೆ. 2014ರಲ್ಲಿನ 0.15 ುಲಿಯನ್‌ ಗ್ರಾಹಕರ ನೈಜೀರಿಯಾ ಅತಿ ಕಡಿಮೆ ಲ್ಯಾಂಡ್‌ಲೈನ್‌ ಹೊಂದಿದ್ದರೆ ಅಷ್ಟು ಜನಸಂಖ್ಯೆಯ ಹೊರತಾಗಿಯೂ ಭಾರತದ 24.4 ಮಿಲಿಯನ್‌ ಅತ್ಯಂತ ಕಡಿಮೆ ಗ್ರಾಹಕರ ಸಮುದಾಯ ಎನ್ನಬಹುದು.

ವಿಶ್ವವು ಸಂಪೂರ್ಣವಾಗಿ ಸ್ಥಿರ ದೂರವಾಣಿಯ ವಿರುದ್ಧವಾಗಿಲ್ಲ. ಇಡೀ ಜಗತ್ತೇ ಮೊಬೈಲ್‌ನ ಹಿಂದೆ ಬಿದ್ದಿದ್ದರೂ,  ಫಿಲಿಫೈನ್ಸ್‌ನಲ್ಲಿ ಶೇ. 18.8ರಷ್ಟು ಸ್ಥಿರ ದೂರವಾಣಿಯ ಗ್ರಾಹಕರು ಜಾಸ್ತಿಯಾಗುತ್ತಿದ್ದಾರೆ. ಮೆಕ್ಸಿಕೋ, ಯುಕೆ, ಫ್ರಾನ್ಸ್‌, ಜಪಾನ್‌, ಮಲೇಶಿಯಾ, ಪಾಕಿಸ್ತಾನ, ಇಟಲಿ, ದಕ್ಷಿಣ ಆಫ್ರಿಕಾದಲ್ಲಿ ಇದೇ ಮಾದರಿಯನ್ನು ಕಾಣುತ್ತಿದ್ದೇವೆ. ನಾಲ್ಕು ವರ್ಷಗಳ ಅನುಪಾತವನ್ನು ತೆಗೆದರೆ ಮೂರು ವರ್ಷಗಳ ಏರಿಕೆ ಕಂಡು 2016ರಲ್ಲಿ ಶೇ. 19.85ರ ಇಳಿಕೆ ಕಂಡ ನೈಜೀರಿಯಾ ಮತ್ತು ಶೇ. 13.82ರ ಕುಸಿತ ಕಂಡ ದಕ್ಷಿಣ ಆಫ್ರಿಕಾದ ಸ್ಥಿತಿ ಅಧ್ಯಯನಯೋಗ್ಯ. ಇವತ್ತಿಗೂ ಫ್ರಾನ್ಸ್‌ನಲ್ಲಿ ಶೇ. 59.72ರ ಸ್ಥಿರ ದೂರವಾಣಿ ಡೆನ್ಸಿಟಿ ಇದ್ದರೆ ಕೊರಿಯಾದಲ್ಲಿ ಶೇ. 56.1, ಜರ್ಮನಿಯಲ್ಲಿ ಶೇ. 53.74 ಹಾಗೂ ಯುಕೆಯಲ್ಲಿ ಶೇ. 52.2 ಸಾಂದ್ರತೆ ಇದೆ ಎಂಬುದು ಕೇವಲ ಶೇ. 1.6ರ ಲ್ಯಾಂಡ್‌ಲೈನ್‌ ಸಾಂದ್ರತೆ ಹೊಂದಿರುವ ಭಾರತದ ಹಿನ್ನೆಲೆಯಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು!

ದೂರಿದೆ, ಕೇಳುವವರು?
ಗ್ರಾಹಕರು ಎಷ್ಟಿದ್ದಾರೆ ಎಂಬುದಕ್ಕಿಂತ ಅವರಿಗೆ ಎಂತಹ ಸೇವೆ ಸಿಗುತ್ತಿದೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಆಸ್ಟ್ರೇಲಿಯಾದಲ್ಲಿ 2011ರ ವೇಳೆಗೇ ಸೇವಾ ಮಾನದಂಡಗಳನ್ನು ನಿರ್ದಿಷ್ಟಪಡಿಸಿ ಕಸ್ಟಮರ್‌ ಸರ್ವೀಸ್‌ ಗ್ಯಾರಂಟಿ ಯೋಜನೆ (ಸಿಎಸ್‌ಜಿ)ಯನ್ನು ಜಾರಿ ಮಾಡಲಾಗಿದೆ. ಐದಕ್ಕೂ ಹೆಚ್ಚು ಸೇವೆಗಳನ್ನು ಈ ಮಾನದಂಡದಡಿ ಅಳತೆಗೋಲುಗಳನ್ನು ಸ್ಥಾಪಿಸಲಾಗಿದೆ. ಒಂದೊಮ್ಮೆ ಈ ಮಟ್ಟದ ಸೇವೆ ನೀಡುವಲ್ಲಿ ವಿಫ‌ಲವಾದರೆ ಸೇವಾ ಕಂಪನಿ ಸಿಎಸ್‌ಪಿ ಗ್ರಾಹಕರಿಗೆ ದಂಡ ರೂಪದಲ್ಲಿ ಪರಿಹಾರ ಕೊಡಬೇಕಾಗುತ್ತದೆ. 2015-16ರಲ್ಲಿ ಅಲ್ಲಿನ ಕಂಪನಿಗಳು ಗ್ರಾಹಕರಿಗೆ ಸೇವಾವ್ಯತ್ಯಯಕ್ಕೆ 16.17 ಮಿಲಯನ್‌ ಡಾಲರ್‌ ಪರಿಹಾರ ಕೊಟ್ಟರೆ ಮರುವರ್ಷ ಅದಕ್ಕಿಂತ ಹೆಚ್ಚು, 20.82 ಮಿಲಿಯನ್‌ ಡಾಲರ್‌ ಕೊಟ್ಟಿವೆ. ಡಾಲರ್‌ಗಳ ಪ್ರಮಾಣಕ್ಕಿಂತ, ಗುಣಮಟ್ಟ ಕಾಯ್ದುಕೊಳ್ಳದಿದ್ದಲ್ಲಿ ಪರಿಹಾರ ಕೊಡಬೇಕಾಗುತ್ತದೆ ಎಂಬ ಅಂಶ ಹೆಚ್ಚು ಗಮನಾರ್ಹ. 

ಇದೇ ಮಾದರಿಯಲ್ಲಿ ಬ್ರೆಜಿಲ್‌ನಲ್ಲಿ 14 ಮಾನದಂಡಗಳ ಕ್ವಾಲಿಟಿ ಮ್ಯಾನೇಜ್‌ಮೆಂಟ್‌ ರೆಗ್ಯುಲೇಷನ್‌ ಇದೆ. ಕೆನಡಾದಲ್ಲಿ ರೇಡಿಯೋ, ಟೆಲಿವಿಷನ್‌ ಹಾಗೂ ಟೆಲಿಕಮ್ಯುನಿಕೇಶನ್‌ ಕಮೀಷನ್‌ ಸಿಆರ್‌ಟಿಸಿ ಮೂಲಕ ಗುಣಮಟ್ಟದ ಮೇಲೆ ಕಣ್ಗಾವಲು ಹಾಕಲಾಗಿದೆ. ಭಾರತದಲ್ಲಿ ಕೂಡ ಸೇವಾ ಗುಣಮಟ್ಟದ ಮಾನದಂಡ ಎಸ್‌ಓಪಿ ವ್ಯವಸ್ಥೆ ಇದ್ದರೂ ಸೇವಾದಾತರು ತಾವೇ ತಾವಾಗಿ ಪರಿಹಾರ ಕೊಟ್ಟ ಉದಾಹರಣೆ ಇಲ್ಲ ಎಂದುಕೊಳ್ಳಬೇಕಾಗಿದೆ. ಬೇರೆ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ದಕ್ಕಿಸಿಕೊಳ್ಳುವ ವಾತಾವರಣ ಶಿಫಾರಸು ಮಾಡುವಂತಥದ್ದಲ್ಲ. ಈ ಕುರಿತು ಮಾಹಿತಿಗೆ ಜಾಲಾಡುವುದು ಕೂಡ ವ್ಯರ್ಥವೇ ಆಗುತ್ತದೆ.

ವರ್ಷಗಳ ಹಿಂದೆ ಟ್ರಾಯ್‌, ದೂರವಾಣಿ, ಸೇವಾದಾತರ ಕಾಲ್‌ ಡ್ರಾಪ್‌ ಸಮಸ್ಯೆಗೆ ಬಳಕೆದಾರರಿಗೆ ಪರಿಹಾರ ಕೊಡುವ ಪ್ರಸ್ತಾಪವನ್ನು ಮಾಡಿತ್ತು. ಈ ನಿಯಮ ಜಾರಿಗೊಳ್ಳುವ ಸಂದರ್ಭದಲ್ಲಿ ಸೇವಾದಾತರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಕೋರ್ಟ್‌ ಈ ನಿಯಮವನ್ನೇ ರದ್ದು ಮಾಡಿತ್ತು. ಟೆಲಿಕಾಂ ಗ್ರಾಹಕರ ದೂರುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಬ್ಯಾಂಕಿಂಗ್‌ ಒಂಬುಡ್ಸ್‌ಮನ್‌, ವಿಮಾ ಲೋಕಪಾಲದ ರೀತಿಯಲ್ಲಿ ಟೆಲಿಕಾಂ ಒಂಬುಡ್ಸ್‌ಮನ್‌ ಅತ್ಯಂತ ಅವಶ್ಯಕ. ಇಂದು ಭಾರತದಲ್ಲಿ ಒಂದೇ ಒಂದು ತ್ರೆ„ಮಾಸಿಕದಲ್ಲಿ ಸರಾಸರಿ 10 ಮಿಲಿಯನ್‌ ದೂರುಗಳು ದಾಖಲಾಗುತ್ತಿವೆ. ಇವುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಸೇವದಾತರನ್ನು ಎಚ್ಚರಿಸಲು ಬೇಕಾದ ಕಾನೂನು ಅವಕಾಶಗಳಿಲ್ಲ. ಬಳಕೆದಾರರ ನ್ಯಾಯಾಲಯಗಳು ಈ ನಿಟ್ಟಿನಲ್ಲಿ ನಿರಾಶೆ ಮೂಡಿಸಿವೆ. ಅದಕ್ಕೆ ಹಲ್ಲುಗಳನ್ನು ಹೊಂದಿರುವ ದೂರವಾಣಿ ಲೋಕಪಾಲ ವ್ಯವಸ್ಥೆ ಜಾರಿಯಾಗಬೇಕು.

ವಾಸ್ತವವಾಗಿ ಟ್ರಾಯ್‌ ಕೂಡ ಸತತವಾಗಿ ಕೇಂದ್ರ ಸರ್ಕಾರದ ಮೇಲೆ ಟೆಲಿಕಾಂ ಒಂಬುಡ್ಸ್‌ಮನ್‌ ಜಾರಿಗೆ ತರುವಂತೆ ಒತ್ತಡ ಹೇರುತ್ತಲೇ ಬಂದಿದೆ. ಹಲವು ಬಾರಿ ಎಲ್ಲ ಆಸಕ್ತರ ಅಭಿಪ್ರಾಯವನ್ನು ಕ್ರೋಢೀಕರಿಸಿ ಅದು ಟೆಲಿಕಾಂ ಒಂಬುಡ್ಸ್‌ಮನ್‌ ಮಾದರಿಯನ್ನು ರೂಪಿಸಿ ಕೇಂದ್ರಕ್ಕೆ ಒಪ್ಪಿಸಿದೆ. ಮೊಬೈಲ್‌ ಸೇವೆ ಕೊಡುತ್ತಿರುವ ದೈತ್ಯ ಕಂಪನಿಗಳಿಗೆ ಇದು ಯಾವತ್ತೂ ನುಂಗಲಾರದ ತುತ್ತು. ಇದೇ ಕಾರಣಕ್ಕಾಗಿಯೇ ಅವುಗಳ ಲಾಬಿ ಯಶಸ್ವಿಯಾಗಿ ನಡೆದಿದ್ದು, ಕಳೆದ ವರ್ಷದವರೆಗೆ ಟೆಲಿಕಾಂ ಲೋಕಪಾಲ ಜಾರಿಗೆ ಕೇಂದ್ರ ಮನಸ್ಸು ಮಾಡಿಲ್ಲ.

ಒಂಬುಡ್ಸ್‌ಮನ್‌ಗೆ ಹಸಿರು ನಿಶಾನೆ?
ಮತ್ತೆ ಪರಿಸ್ಥಿತಿ ಬದಲಿಸಿದಂತಿದೆ. ಇದೀಗ ಕೇಂದ್ರ ಟೆಲಿಕಾಂ ಆಯೋಗವು ದೂರವಾಣಿ ಒಂಬುಡ್ಸ್‌ಮನ್‌ ಜಾರಿಗೆ ಮನಸ್ಸು ಮಾಡಿದೆ. ಟ್ರಾಯ್‌ ಶಿಫಾರಸುಗಳನ್ನು ಆಧರಿಸಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಟೆಲಿಕಾಂ ಸೆಕ್ರೆಟರಿ ಅರುಣ್‌ ಸುಂದರರಾಜನ್‌ ಮೇ ತಿಂಗಳಿನಲ್ಲಿಯೇ ಪ್ರಕಟಿಸಿದ್ದಾರೆ. ಈಗಿನ ಮಾಹಿತಿ ಪ್ರಕಾರ, ಮೊದಲ ಹಂತದಲ್ಲಿ ಗ್ರಾಹಕರು ಕಂಪನಿಯ ಕಾಲ್‌ ಸೆಂಟರ್‌ಅನ್ನು ಸಂಪರ್ಕಿಸಬೇಕು. ಇದರ ನಂತರ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಒಯ್ಯಬಹುದು. ಈ ಎರಡೂ ಸೇವಾದಾತರ ವ್ಯವಸ್ಥೆಯಡಿಯಲ್ಲಿ ರಚಿತವಾದ ಪರಿಹಾರ ವ್ಯವಸ್ಥೆಯಾದರೆ, ಸ್ವತಂತ್ರವಾದ ಒಂಬುಡ್ಸ್‌ಮನ್‌ಗೆ ಇಲ್ಲಿ ಸಮಾಧಾನ ಸಿಕ್ಕದ ಪ್ರಕರಣಗಳನ್ನು ಮಂಡಿಸಬಹುದು. ದಂಡದ ಪ್ರಸ್ತಾಪವನ್ನು ಟ್ರಾಯ್‌ ನಿಗದಿಪಡಿಸಬೇಕಿದೆ. 

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು,
ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next