ಬೆಂಗಳೂರು: ಕೊಡಚಾದ್ರಿಯಿಂದ ಕೊಲ್ಲೂರುವರೆಗೆ ರೋಪ್ ವೇ ನಿರ್ಮಾಣಕ್ಕಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಒಟ್ಟು 101.16 ಎಕರೆ ಭೂಮಿ ಒದಗಿಸುವುದರ ಸಹಿತ ಹಲವು ಪ್ರಮುಖ ನಿರ್ಣಯಗಳನ್ನು ರಾಜ್ಯ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು 21,473 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಜತೆಗೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ದಿನದ 24 ತಾಸು ಗಣಿಗಾರಿಕೆ ನಡೆಸಲು ಮತ್ತು ಸಾಗಣೆ ಚಟುವಟಿಕೆ ಮುಂದುವರಿಸಲು ಅನುಮತಿ ನೀಡುವ ಪ್ರಸ್ತಾವಕ್ಕೆ ತಡೆ ಬಿದ್ದಿದೆ. ಉನ್ನತ ಶಿಕ್ಷಣ ಇಲಾಖೆಯಡಿ ಮೂರು ಖಾಸಗಿ ವಿ.ವಿ. ಸ್ಥಾಪನೆ ಪ್ರಸ್ತಾವದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು, ಯುಜಿಸಿ ಮಾರ್ಗಸೂಚಿಯನ್ವಯ ಪರಿಶೀಲನೆ ನಡೆಸಲು ಉಪಸಮಿತಿ ರಚಿಸಲು ನಿರ್ಧರಿಸಲಾಯಿತು. ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ತಜ್ಞರ ಸಮಿತಿ ನೀಡಿರುವ ವರದಿಗೆ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ.
ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣ ತಿದ್ದುಪಡಿ ಮಸೂದೆ 2020ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜತೆಗೆ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ರಕ್ಷಣ ಮಸೂದೆ, ಕರ್ನಾಟಕ ಶಿಕ್ಷಣ ಇಲಾಖೆ ಸೇವಾ ನಿಯಮಾವಳಿ ತಿದ್ದುಪಡಿ ಮಸೂದೆ, ತೋಟಗಾರಿಕಾ ವಿಜ್ಞಾನ ವಿ.ವಿ. ತಿದ್ದುಪಡಿ ಮಸೂದೆ ಮಂಡನೆಗೆ ಅನುಮೋದನೆ ನೀಡಲಾಗಿದೆ.