Advertisement
ಅಜಮಾಸು 30 ವರ್ಷದ ಹಿಂದೆ ಲಾಲೂ ಪ್ರಸಾದ್ ಯಾದವ್ ಅಧಿಕಾರದ ಮೆಟ್ಟಿಲುಗಳ ಮೇಲೆ ಮೊದಲ ಹೆಜ್ಜೆಯಿ ಟ್ಟಾಗ ಹುಟ್ಟಿಸಿದ್ದ ಭರವಸೆಯಿದೆಯಲ್ಲ, ಆ ಭರವಸೆಗೂ ಈಗ ಅವರು ತಲುಪಿರುವ ಸ್ಥಿತಿಗೂ ನಡುವಿನ ಪಯಣವನ್ನು ವಿಶ್ಲೇಷಿಸುವ ಅಗತ್ಯ ಬಹಳಷ್ಟಿದೆ. ಆ ಸಮಯದಲ್ಲಿ ಕೋಮುವಾದಿ ರಾಜಕಾರಣ ಮತ್ತು ಬಂಡವಾಳಶಾಹಿ ರಾಜಕಾರಣದ ವಿರೋಧಿಗಳೆಲ್ಲ ಲಾಲೂರನ್ನು ತಮ್ಮ ಕಣೆಪ್ಪೆಯ ಮೇಲೆ ಕೂರಿಸಿಕೊಂಡು ಸಂಭ್ರಮಿಸುತ್ತಿದ್ದರು. ಬಡ, ದನಮೇಯಿಸುವ ವ್ಯಕ್ತಿಯೊಬ್ಬ ಸಾಮಾಜಿಕ ನ್ಯಾಯದ ಹೋರಾಟದ ಕಾರಣದಿಂದ ಬಿಹಾರದಂಥ ರಾಜ್ಯದ ಮುಖ್ಯಮಂತ್ರಿಯಾಗಿದ್ದ. ಅಧಿಕಾರಕ್ಕೇರಿದರೂ ಆತ ತನ್ನ ಮೈಯಿಂದ ಹೊರಹೊಮ್ಮುತ್ತಿದ್ದ ಮಣ್ಣಿನ ವಾಸನೆಯನ್ನು ದೂರ ಮಾಡಿಕೊಂಡಿರಲಿಲ್ಲ.
ಮುಖ್ಯಮಂತ್ರಿಯಾಗಿ ಮೊದಲ ಬಾರಿ ದೆಹಲಿಗೆ ಆಗಮಿಸಿದ್ದ ಲಾಲೂ ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಕರ್ತರೆಲ್ಲ ಜಮೆಯಾಗಿ ಪ್ರಶ್ನೆ ಕೇಳಲು ಸಿದ್ಧರಾಗಿದ್ದರು, ಅಷ್ಟರಲ್ಲೇ ಲಾಲೂ ಅಂದರು-“”ಈ ಪ್ರಸ್, ವಾರ್ತೆ ಎಲ್ಲಾ ಇದ್ದದ್ದೆ. ಬನ್ನಿ ಮೊದಲು ಸ್ವಲ್ಪ ಪಾನ್‌ಬೀಡಾ ಹಾಕ್ಕೊಂಡು ಬರೋಣ”ಹೀಗೆ ಹೇಳಿದ್ದೇ ಅವರು ಎಲ್ಲಾ ಪತ್ರಕರ್ತರನ್ನು ಬಿಹಾರ ಭವ ನದ ಎದುರಿನ ಬೀಡಾ ಅಂಗಡಿಗೆ ಕರೆದೊಯ್ದು, ಪ್ರತಿಯೊಬ್ಬ ಪತ್ರಕರ್ತನಿಗೂ ತಾವೇ ಪಾನ್ ಮಾಡಿಸಿ ತಿನ್ನಿಸಿದರು. ಅಲ್ಲೇ ನಿಂತು ಬಿಹಾರ ಮತ್ತು ಇಡೀ ದೇಶದಲ್ಲಿ ಅರಳುತ್ತಿದ್ದ ಹೊಸ ರೀತಿಯ ರಾಜನೀತಿಯ ಬಗ್ಗೆ ಚರ್ಚೆ ಮಾಡಿದರು.
Related Articles
ವರ್ಷಗಳುರುಳಿದವು. ಲಂಡನ್‌ನಲ್ಲಿ ವರದಿಗಾರಿಕೆ ಮಾಡು ತ್ತಿದ್ದ ನಾನು ಒಮ್ಮೆ ರಜೆಯ ನಿಮಿತ್ತ ದಿಲ್ಲಿಗೆ ಬಂದೆ. ಅಲ್ಲಿ ನನ್ನ ಸಹೋದ್ಯೋಗಿ, ಬಿಬಿಸಿಯ ಸಂಜೀವ್ ಶ್ರೀವಾಸ್ತವ್ ಜೊತೆ ಸೇರಿ ಲಾಲೂ ಪ್ರಸಾದ್ ಯಾದವರ ದೆಹಲಿ ನಿವಾಸಕ್ಕೆ ತೆರಳಿದೆ.
Advertisement
ಬದಲಾಗಿಬಿಟ್ಟಿದ್ದರು ಲಾಲೂ!ಲಾಲೂ ಸುತ್ತಲೂ ಏನಿಲ್ಲವೆಂದರೂ ಸುಮಾರು 8 ಮಂದಿ ಮೊಘಲ್ ಬಾದಶಾಹನ ಗುಲಾಮ ಚಾಕರರಂತೆ ಗಿರಕಿ ಹೊಡೆಯುತ್ತಿದ್ದರು. ಲಾಲೂ ಎಲ್ಲೋ ಹೊರಡಲು ಸಿದ್ಧರಾಗುತ್ತಿದ್ದರು, ಆದರೆ ಅವರಿಗೆ ಸಾಕ್ಸ್(ಕಾಲುಚೀಲ) ಸಿಗದಾದವು. ಆಗವರು ಜೋರಾಗಿ ಬೈಯುತ್ತಾ ಒಬ್ಬ ಕೆಲಸಗಾರನನ್ನು ಕರೆದರು. ಅವನು ಹೆದರಿಕೆಯಿಂದ ಕೈಯಲ್ಲಿ ಅವರ ಸಾಕ್ಸ್ ಹಿಡಿದು ಓಡುತ್ತಾ ಬಂದ. ಅದನ್ನು ನೋಡಿದ್ದೇ ಲಾಲೂ ಪ್ರಸಾದ್ ತಮ್ಮ ಕಾಲನ್ನು ಮುಂದೆ ಮಾಡಿದರು. ಮನೆಗೆಲಸದವ ಕೆಳಗೆ ಕೂತು ಲಾಲೂ ಪ್ರಸಾದ್‌ರ ಕಾಲಿಗೆ ಸಾಕ್ಸ್ ಹಾಕಲಾರಂಭಿಸಿದ. ಕೆಲಸಗಾರನಿಂದ ಕಾಲಿಗೆ ಸಾಕ್ಸ್ ಹಾಕಿಸಿಕೊಳ್ಳುತ್ತಿರುವ ಈ ಲಾಲೂ, ಒಂದೊಮ್ಮೆ ಪತ್ರಕರ್ತರನ್ನು ಪಾನ್‌ಬೀಡಾ ಅಂಗಡಿಗೆ ಕರೆದೊಯ್ದು, ಹರಟೆ ಹೊಡೆಯುತ್ತಿದ್ದ ಇದೇ ಲಾಲೂನಾ? ಎನ್ನುವ ಪ್ರಶ್ನೆ ನನ್ನ ತಲೆಯಲ್ಲಿ. ಒಟ್ಟಿನಲ್ಲಿ ಕೆಲವೇ ವರ್ಷಗಳಲ್ಲಿ ಲಾಲೂ ಪ್ರಸಾದ್ ಬದಲಾಗಿಬಿಟ್ಟಿದ್ದರು.
***
ಪ್ರತಿಭಾವಂತ ಫೋಟೋಗ್ರಾಫರ್ ಪ್ರವೀಣ್ ಜೈನ್ ಪಟ್ನಾದಲ್ಲಿನ ಸರ್ವೆಂಟ್ ಕ್ವಾರ್ಟರ್‌ಗೆ (ಲಾಲೂ ಮನೆಗೆ) ತೆರಳಿ ಅಲ್ಲಿ ರಾಬಿx ದೇವಿ ನೆಲದ ಮೇಲೆ ಕುಳಿತು ಅಡುಗೆ ಮಾಡುತ್ತಿ ರುವ, ಮುಸುರೆ ತಿಕ್ಕುತ್ತಿರುವ ಫೋಟೋ ತೆಗೆದಿದ್ದರು.(ಲಾಲೂ ಆಗಷ್ಟೇ ಮುಖ್ಯಮಂತ್ರಿಯಾಗಿದ್ದರು. ಅವರ ಕುಟುಂಬದವರ ಫೋಟೋ ತೆಗೆಯಲು ಪ್ರವೀಣ್ ಪಾಟ್ನಾಗೆ ಹೋಗಿದ್ದರು). ಈ ಐತಿಹಾಸಿಕ ಚಿತ್ರಗಳನ್ನು ತೆಗೆದ ಪ್ರವೀಣ್ ಜೈನ್ ಆ ದಿನಗಳನ್ನು ನನ್ನ ಮುಂದೆ ನೆನಪು ಮಾಡಿಕೊಂಡದ್ದು ಹೀಗೆ: “”ಲಾಲೂ ಅವರಿಗೆ ಮುಖ್ಯಮಂತ್ರಿ ನಿವಾಸ್ ಅಲಾಟ್ ಆಗಿತ್ತು. ಆದರೆ ಅವರ ಪರಿವಾರ ಸರ್ವೆಂಟ್ ಕ್ವಾರ್ಟರ್‌ನಲ್ಲೇ ಇತ್ತು. ನಾನು ರಾಬಿx ಅವರ ಫೋಟೋ ತೆಗೆಯುತ್ತಾ ಕೇಳಿದೆ-“ಇಷ್ಟು ದೊಡ್ಡ ಬಂಗಲೆ ನಿಮಗೆ ಸಿಕ್ಕಿದ್ದರೂ ಈ ಹಳೆಯ ಮನೆಯಲ್ಲೇ ಏಕಿದ್ದೀರಿ?. ಆಗ ರಾಬಿx ದೇವಿ ತಮಗೆ ಸರ್ವೆಂಟ್ ನಿವಾಸಗಳಲ್ಲೇ ಇದ್ದು ಅಭ್ಯಾಸವಾಗಿದೆ. ಇಲ್ಲಿರುವುದೇ ತಮಗಿಷ್ಟ’ ಎಂದಿದ್ದರು”. ಪ್ರವೀಣ್ ಜೈನ್ ರಾಬಿxಯೊಂದಿಗೆ ಮಾತನಾಡುತ್ತಲೇ ಅವರ ಚಿತ್ರಗಳನ್ನು ಸೆರೆಹಿಡಿದಿದ್ದರು.
***
ಲಾಲೂ ಪ್ರಸಾದ್ ಯಾದವ್ ಒಂದು ಸಂದರ್ಶನದಲ್ಲಿ ತಮ್ಮ ನೆಲಮೂಲೀಯ ರಾಜನೀತಿಯ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದರು. ಒಂದು ವೇಳೆ ತಾವು ಅಧಿಕಾರದಿಂದ ಹೊರಟು ಹೋದರೆ ನಕ್ಸಲರು ಬಿಹಾರದ ನಗರಗಳನ್ನು ಸುತ್ತುವರಿದು ಹತ್ಯಾಕಾಂಡ ಶುರುಮಾಡಿಬಿಡುತ್ತಾರೆ. ಹೀಗಾಗಿ ತಾವು ಅಧಿ ಕಾರದಿಂದ ದೂರವಾಗುವುದಿಲ್ಲ, ಏಕೆಂದರೆ ತಮಗೆ ಬಡವರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ ಎಂದು ನನಗವರು ಹೇಳಿದ್ದರು. ಇದನ್ನು ಅರ್ಥಮಾಡಿಸುವುದಕ್ಕಾಗಿ ಅವರು ಬಿಹಾರದ ಹಳ್ಳಿಗಾಡಿನ ಜನರ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದರು. ಆ ಭಾಗಗಳಲ್ಲಿ ಇಲಿಯ ಒಂದು ತಳಿಯಿದೆಯಂತೆ. ಅದನ್ನು ಸ್ಥಳೀಯರು ಕ್ರೋಸ್ನಾ ಎಂದು ಕರೆಯುತ್ತಾರಂತೆ. “”ಕ್ರೋಸ್ನಾ ಇಲಿಯನ್ನು ಹಿಡಿದು ಅದರ ಹೊಟ್ಟೆಯಲ್ಲಿ ರಂಧ್ರ ಕೊರೆಯಲಾಗುತ್ತದೆ. ಒಳಗಿರುವುದನ್ನೆಲ್ಲ ಹೊರತೆಗೆದು ಹಸಿರು ಮೆಣಸಿನಕಾಯಿಯ ಮಸಾಲೆ ತುಂಬಲಾಗುತ್ತದೆ. ಆಮೇಲೆ ಆ ಇಲಿಯನ್ನು ಬೆಂಕಿಯಲ್ಲಿ ಸುಡಲಾಗುತ್ತದೆ. ಕ್ರೋಸ್ನಾ ಇಲಿಯ ಕೂದಲು ಬೆಂಕಿಯಲ್ಲಿ ಕರಗಿ ಹೋಗುತ್ತದೆ. ಮಸಾಲೆಯು ಇಲಿಯ ದೇಹದ್ರವಗಳಲ್ಲಿ ಬೇಯುತ್ತದೆ. ಆ ಇಲಿಯನ್ನು ನಾನೂ ತಿಂದಿದ್ದೇನೆ. ಈ ಕಾರಣಕ್ಕಾಗಿಯೇ ಇಲಿ ತಿನ್ನುವ ಬಡ ಜನರು ಹೇಗೆ ಯೋಚಿಸುತ್ತಾರೆ ಮತ್ತು ಏನು ಯೋಚಿಸುತ್ತಾರೆ ಎನ್ನುವುದು ನನಗೆ ಗೊತ್ತಿದೆ” ಎಂದಿದ್ದರು ಲಾಲು.
***
ಇದಾದ ಎಷ್ಟೋ ವರ್ಷಗಳ ನಂತರ ನಾನು ಲಾಲೂರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಪ್ರೇಮ್ ಗುಪ್ತಾ ಎಂಬ ವ್ಯಕ್ತಿಯ ಮೂಲಕ ಮಾತ್ರ ಅವರನ್ನು ತಲುಪಲು ಸಾಧ್ಯ ಎನ್ನುವುದು ಆಗ ತಿಳಿಯಿತು. ಈ ಪ್ರೇಮ್ ಗುಪ್ತಾ ಎನ್ನುವವರು ಲಾಲೂ ಪ್ರಸಾದ್‌ಆಪ್ತ ಉದ್ಯಮಿಗಳಲ್ಲಿ ಒಬ್ಬರು. ಅವರು ಆರ್‌ಜೆಡಿಯ ಮೂಲಕ ರಾಜ್ಯಸಭೆ ಪ್ರವೇಶಿಸಿದವರು. (ಕೆಲ ತಿಂಗಳ ಹಿಂದೆ ಸಿಬಿಐ ಅಕ್ರಮ ಆಸ್ತಿ ಪ್ರಕರಣದಲ್ಲಿ ಲಾಲೂ ಸೇರಿದಂತೆ, ಪ್ರೇಮ್ ಗುಪ್ತಾರ ಪತ್ನಿಯ ಮನೆಯ ಮೇಲೂ ದಾಳಿ ಮಾಡಿತ್ತು) ಏನೇ ಹೇಳಿ. ಪ್ರೇಮ್ ಗುಪ್ತಾರಂಥ ದೊಡ್ಡ ಉದ್ಯಮಿ ಮತ್ತು ಅವರ ಪತ್ನಿ ಎಂದಿಗೂ ಮುಸಹರ್ ಜನಾಂಗದ ಜೊತೆ ಕುಳಿತು ಇಲಿ ತಿಂದಿರಲಿಕ್ಕಿಲ್ಲ. ಆದರೆ ಲಾಲೂ ತಿಂದಿದ್ದಾರಲ್ಲ? ಅಥವಾ ಲಾಲೂ ಪ್ರಸಾದ್ ಕೂಡ ಕ್ರೋಸ್ನಾ ಇಲಿಯ ಸ್ವಾದವನ್ನು ಮರೆತುಬಿಟ್ಟಿದ್ದಾರಾ? ಈ ಪ್ರಶ್ನೆಯನ್ನು ಒಮ್ಮೆ ಅವರಿಗೆ ಕೇಳುವ ಬಯಕೆ ನನಗೆ.
(ಲಾಲೂರ ದೆಹಲಿ ನಿವಾಸದ ಮೇಲೆ ಸಿಬಿಐ ದಾಳಿಯಾದಾಗ “ಬಿಬಿಸಿ ಹಿಂದಿ’ಯಲ್ಲಿ ಪ್ರಕಟವಾದ ಲೇಖನವಿದು) – ರಾಜೇಶ್ ಜೋಷಿ, ಬಿಬಿಸಿ ಹಿಂದಿ
ಚಿತ್ರಗಳು: ಪ್ರವೀಣ್ ಜೈನ್