ನವದೆಹಲಿ: ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಲಾಲೂ ಪ್ರಸಾದ್ ಯಾದವ್ ಕುಟುಂಬ ಮೂಲಗಳು ತಿಳಿಸಿವೆ.
ಲಾಲೂ ಪ್ರಸಾದ್ ಯಾದವ್ ಅವರಿಗೆ ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಿದ್ದಾರೆ. ಈ ಬಗ್ಗೆ ಲಾಲು ಯಾದವ್ ಪುತ್ರ ತೇಜಸ್ವಿ ಯಾದವ್ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಟ್ವೀಟ್ ನಲ್ಲಿ ತಂದೆಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಲಾಗಿದೆ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ, ಅಲ್ಲದೆ ಮೂತ್ರಪಿಂಡ ದಾನ ಮಾಡಿದ ಸಹೋದರಿ ರೋಹಿಣಿ ಅವರು ಕೂಡಾ ಆರೋಗ್ಯವಾಗಿದ್ದಾರೆ, ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಏಳು ಪುತ್ರಿಯರು ಮತ್ತು ಇಬ್ಬರು ಪುತ್ರರಲ್ಲಿ ರೋಹಿಣಿ ಎರಡನೆಯವರು.
ಆಸ್ಪತ್ರೆಗೆ ಹೋಗುವ ಕೆಲವು ಗಂಟೆಗಳ ಮೊದಲು, ರೋಹಿಣಿ ಲಾಲು ಪ್ರಸಾದ್ ಬಗ್ಗೆ ತಮ್ಮ ಭಾವನೆಗಳನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಲಾಲು ಅವರ ಎರಡನೇ ಪುತ್ರಿ ರೋಹಿಣಿ ನಾನು ದೇವರನ್ನು ನೋಡಿಲ್ಲ, ಆದರೆ ತನ್ನ ತಂದೆಯನ್ನು ದೇವರ ರೂಪದಲ್ಲಿ ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಾಬ್ರಿ ದೇವಿ ಮತ್ತು ಮಿಸಾ ಭಾರತಿ ಈಗಾಗಲೇ ಸಿಂಗಾಪುರದಲ್ಲಿದ್ದಾರೆ.