ಬೆಳಗಾವಿ: ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ತಾಲೂಕಿನ ಹಿರೇಬಾಗೇವಾಡಿ ಗ್ರಾಮಕ್ಕೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಬುಧವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಸುಮಾರು 20 ಟನ್ ತರಕಾರಿ ಹಂಚಿಕೆ ಮಾಡಿದರು.
ನಂತರ ಮಾತನಾಡಿದ ಹೆಬ್ಟಾಳಕರ, ಹಿರೇ ಬಾಗೇವಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಿರೀಟದಂತಿದೆ. ಇದು ಸಜ್ಜನರ, ಬುದ್ಧಿವಂತರ ಊರು. ಆದರೆ ದುರದೃಷ್ಟವಶಾತ್ ಗ್ರಾಮದಲ್ಲಿ ಕೋವಿಡ್ 19 ಸೋಂಕು ಬಂದು ಜನಜೀವನವನ್ನೇ ಹದಗೆಡಿಸಿದೆ. ಆದರೆ ಗ್ರಾಮದ ಜನರು ಧೈರ್ಯ ಕಳೆದುಕೊಳ್ಳುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗಿದ್ದೇನೆ. ಬಡವ, ಬಲ್ಲಿದ ಎನ್ನದೇ ಗ್ರಾಮದ ಎಲ್ಲ ಜನರಿಗೂ ತರಕಾರಿ ನೀಡಲಾಗುತ್ತಿದೆ ಎಂದರು.
ರೈತರಿಂದಲೇ ನೇರವಾಗಿ ತರಕಾರಿ ಖರೀದಿಸಿ ತಂದಿದ್ದೇವೆ. ಬೆಳೆದವರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದರು. ಹಾಗಾಗಿ ಅವರಿಗೂ ಸಹಾಯ ಮಾಡುವ ಪ್ರಯತ್ನ ಮಾಡಿದ್ದೇನೆ. ಜೊತೆಗೆ ತರಕಾರಿ ಖರೀದಿಸಲಾಗದೆ ಮನೆಯೊಳಗೆ ಬಂದಿಯಾಗಿರುವ ಜನರಿಗೂ ಅಳಿಲು ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದೇನೆ. ಗುರುವಾರ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಜನರು ಸಹಕಾರ ನೀಡಿ ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸಿದರೆ ಅತೀ ಶೀಘ್ರದಲ್ಲಿ ಕೋವಿಡ್ 19 ಹೆಮ್ಮಾರಿ ಮಾಯವಾಗಲಿದೆ. ಜನಜೀವನ ಸಹಜಸ್ಥಿತಿಗೆ ಬರಲಿದೆ. ಲಕ್ಷ್ಮೀ ತಾಯಿ ಫೌಂಡೇಶನ್ ನಿಮ್ಮ ಸಂಕಷ್ಟಗಳಿಗೆ ನೆರವಾಗಲಿದೆ. ಯಾರೂ ಆತಂಕ ಪಡಬಾರದು ಎಂದು ಧೈರ್ಯ ತುಂಬಿದರು.
ಕಾಂಗ್ರೆಸ್ ಮುಖಂಡರಾದ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಟಾಳಕರ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.