Advertisement

ವಿಜೃಂಭಣೆಯ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ

10:06 PM Apr 21, 2019 | Lakshmi GovindaRaju |

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಕುರುವಂಕ ಗ್ರಾಮದಲ್ಲಿ ಲಕ್ಷ್ಮೀದೇವಿ, ಕಲ್ಕೆರೆ ಅಮ್ಮನವರ ಉತ್ಸವ ಹಾಗೂ ಸೋಮನ ಕುಣಿತ ವಿಜೃಂಭಣೆಯಿಂದ ನಡೆಯಿತು.

Advertisement

ಗ್ರಾಮದ ಅಧಿದೇವತೆ ಮಾಧವರಾಯ ಹಾಗೂ ಲಕ್ಷ್ಮೀ ದೇವಾಲಯದಲ್ಲಿ ಬೆಳಗ್ಗೆ ಸುಪ್ರಭಾತದೊಂದಿಗೆ ದೇವರ ಪೂಜೆ ಪ್ರಾರಂಭವಾಯಿತು. ಗ್ರಾಮಸ್ಥರು ದೇವಾಲಯಕ್ಕೆ ಭೇಟಿ ನೀಡಿ ಹಣ್ಣು, ಕಾಯಿ ಹಾಗೂ ಹೂವು ಅರ್ಪಿಸುವ ಮೂಲಕ ದೇವರ ಪೂಜೆಯಲ್ಲಿ ಪಾಲ್ಗೊಂಡ‌ರು.

ವಿಶೇಷ ಪೂಜೆ: ದೇವರ ಮೂಲ ವಿಗ್ರಹಕ್ಕೆ ಅಭಿಷೇಕ ಮಾಡಿ ವಿವಿಧ ಬಗೆಯ ಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ನಂತರ ಪಕ್ಕದ ಗ್ರಾಮದಿಂದ ಅಡ್ಡೆಯಲ್ಲಿ ಕರೆತಂದಿದ್ದ ಕಲ್ಕೆರೆ ಅಮ್ಮನವರನ್ನು ಗ್ರಾಮದ ಕೆರೆಗೆಯಲ್ಲಿ ಸ್ವಚ್ಛಗೊಳಿಸಿ, ಭಕ್ತರು ತಂದಿದ್ದ ಸೀರೆ ಹೂವುಗಳಿಂದ ಅಲಂಕಾರ ಮಾಡಿದರು. ರಾತ್ರಿ ಪೂರ್ತಿ ಅಡ್ಡೆಯಲ್ಲಿ ಮೆರವಣಿಗೆ ಮಾಡಲಾಯಿತು ಈ ವೇಳೆ ಲಕ್ಷ್ಮೀ ದೇವಿ ಉತ್ಸವ ಹಾಗೂ ಸೋಮನ ಕುಣಿತ ನಡೆಯಿತು.

ಹರಕೆ ತೀರಿಸಿದ ಭಕ್ತರು: ದೇವರಿಗೆ ಹರಕೆ ಹೊತ್ತಿದ್ದ ಮಳೆಯರು ಬಾಯಿಗೆ ಬೀಗ ಹಾಕಿಸಿಕೊಂಡು, ಕಳಸ ಹೊತ್ತಿದ್ದರು. ರಾತ್ರಿ ಪೂರ್ತಿ ಅಡ್ಡೆ ದೇವರ ಮೆರಣಿಗೆ ವೇಳೆ ಭಕ್ತರು ಹೆಜ್ಜೆ ಹಾಕಿದರು. ಬೆಳಗ್ಗೆ 5.30 ಕ್ಕೆ ಗ್ರಾಮ ಮುಂಭಾಗದ ಕಲ್ಯಾಣಿ ಪಕ್ಕದಲ್ಲಿ ಕೆಂಡಕೊಂಡ ಏರ್ಪಡಿಸಿದ್ದರು.

ಅಡ್ಡೆ ದೇವರು ಹೊತ್ತಿದ್ದ ಭಕ್ತರು ಮೊದಲು ಕೆಂಡ ಹಾಯ್ದರು. ನಂತರ ಲಕ್ಷ್ಮೀ ದೇವಿ ಹೊತ್ತವರು ಹಾಗೂ ಕಳಸ ಹೊತ್ತವರು ಕೆಂಡ ಹಾಯ್ದರೆ ಹರಕೆ ಹೊತ್ತವರು ಕೆಂಡ ಹಾಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಹರಳಹಳ್ಳಿ, ಮರುವನಹಳ್ಳಿ ಗ್ರಾಮದ ಭಕ್ತರಿಗೆ ಪ್ರಸಾದ ನೀಡಲಾಯಿತು.

Advertisement

ಸೋಮನ ಕುಣಿತ: ಮಾರನೇ ದಿವಸ ಸಂಜೆ ಗ್ರಾಮದ ಮುಂಭಾಗದಲ್ಲಿ ಅಡ್ಡೆ ದೇವರ ಹಾಗೂ ಸೋಮನ ಕುಣಿತ ನಡೆಯಿತು. ಹರಕೆ ಹೊತ್ತಿದ್ದ ಭಕ್ತರು ಪ್ರತಿ ವರ್ಷದಂತೆ ಈ ಬಾರಿಯೂ ಸೋಮ ದೇವರಿಂತ ಛಡಿಏಟು ತಿಂದರು. ನಂತರ ಸೋಮದೇವರಿಗೆ ಹಣ್ಣು ಅರ್ಪಿಸಿ ಗ್ರಾಮದ ಮಳೆಯರು ಮತ್ತು ಮಕ್ಕಳು ಸೋಮನ ಕುಣಿತ ನೋಡಿ ಸಂಭ್ರಮಿಸಿದರು.

ಗ್ರಾಮದ ಹೆಣ್ಣು ಮಗಳ ಆಗಮನ: ಪ್ರತಿ ವರ್ಷ ನಡೆಯುವ ಲಕ್ಷ್ಮೀದೇವಿ ಉತ್ಸವಕ್ಕೆ ಗ್ರಾಮದ ಹೆಣ್ಣು ಮಕ್ಕಳು ಆಗಮಿಸುತ್ತಾರೆ. ವಿವಾಹವಾಗಿ ಗಂಡನ ಮನೆಗೆ ಹೋಗಿರುವ ಹೆಣ್ಣು ಮಗಳು ಈ ಉತ್ಸವಕ್ಕೆ ಆಗಮಿಸುವ ಮೂಲಕ ತವರು ಮನೆಯ ಲಕ್ಷ್ಮೀಯನ್ನು ವರ್ಷಕ್ಕೆ ಒಮ್ಮೆಯಾದರು ಕರೆತರುವುದು ಇದರ ಉದ್ದೇಶವಾಗಿದೆ.

ಗ್ರಾಮೀಣ ಸೊಗಡು: ಅರ್ಚಕ ದಿನೇಶ್‌ ಧರ್ಮ ಸಂದೇಶ ನೀಡಿ, ಭಾರತ ಹಳ್ಳಿಗಳ ದೇಶ ಆದರೆ ಗ್ರಾಮೀಣ ಭಾಗದ ಜನತೆ ಜಾಗತೀಕರಣಕ್ಕೆ ಮಾರು ಹೋಗಿ ಗ್ರಾಮೀಣ ಸೊಗಡು ಕಳೆದುಕೊಳ್ಳುತ್ತಿದ್ದಾರೆ. ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮ ಕಡಿಮೆ ಯಾಗುತ್ತಿವೆ. ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮವನ್ನು ಉಳಿಸುವ ಕಡೆ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.

ಸನಾತನ ಧರ್ಮವನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತಿದೆ ಆದರೆ ಸನಾತನರಾದ ನಾವು ಹಿಂದೂ ಧರ್ಮದ ಬಗ್ಗೆ ಅಸಡೆ ತೋರುತ್ತಿದ್ದೇವೆ. ನಾಜೋಕು ಬದುಕಿಗೆ ಮಾರು ಹೋಗುತ್ತಿರುವ ಯುವ ಸಮುದಾಯ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಮರೆಯುತ್ತಿದ್ದು ಪಾಶ್ಚಿಮಾತ್ಯರನ್ನು ಅನುಸರಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಗ್ರಾಮದಲ್ಲಿ ಎಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿರುವುದಕ್ಕೆ ಜಾತ್ರೆ, ರಥೋತ್ಸವ ಹಾಗೂ ಹಬ್ಬಗಳು ಕಾರಣ, ಒಂದು ವೇಳೆ ಇವುಗಳ ಆಚರಣೆ ನಿಂತಲ್ಲಿ ಎಲ್ಲರ ಮನಸ್ಸಿನಲ್ಲಿ ಒಡುಕು ಮೂಡುತ್ತದೆ ಗ್ರಾಮದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸಹಬಾಳ್ವೆಯಿಂದ ಬದುಕಲು ದೇವರ ಉತ್ಸವ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಗ್ರಾಮದ ಮುಖಂಡರಾದ ಶಿವಣ್ಣ, ಧರ್ಮ, ಬಸವರಾಜು, ಸಂದೇಶ, ಸಂತೋಷ‌, ಸತೀಶ, ಪುಟ್ಟಸ್ವಾಮಯ್ಯ, ಶಾಂತಮ್ಮ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next