ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕಾರು ಹರಿದು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದ ಘಟನೆ ನಂತರ ಹಿಂಸಾಚಾರ ನಡೆದಿತ್ತು. ಏತನ್ಮಧ್ಯೆ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹಾಗೂ ಲಖಿಂಪುರ್ ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರ ಬಂದ್ ಗೆ ಮೈತ್ರಿಕೂಟದ ಎನ್ ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ಸೋಮವಾರ ಕರೆ ನೀಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉತ್ಸಾಹದಿಂದ ತೇಲಾಡುತ್ತಿದ್ದೇನೆ: 79 ನೇ ವಸಂತಕ್ಕೆ ಕಾಲಿಟ್ಟ ಅಮಿತಾಬ್ ಬಚ್ಚನ್
ರೈತರ ಪ್ರತಿಭಟನೆ ಬೆಂಬಲಿಸಿ ನಡೆದ ಬಂದ್ ಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರದ ಮೈತ್ರಿಕೂಟದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ಬೆಂಬಲ ವ್ಯಕ್ತಪಡಿಸಿದೆ. ಅಲ್ಲದೇ ಮೂರು ಪಕ್ಷಗಳು ಪತ್ರಿಕಾಗೋಷ್ಠಿಯಲ್ಲಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದವು.
ಬಂದ್ ಗೆ ಮಹಾರಾಷ್ಟ್ರದ 12 ಕೋಟಿ ಜನರು ಬೆಂಬಲ ನೀಡಬೇಕೆಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು. ತುರ್ತು ಸೇವೆಯನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಆಗಿದ್ದು, ಜನ ಸಂಚಾರ ವಿರಳವಾಗಿರುವುದಾಗಿ ವರದಿ ವಿವರಿಸಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋಗಳನ್ನು ಶಿವಸೇನಾ ಕಾರ್ಯಕರ್ತರು ತಡೆದು ನಿಲ್ಲಿಸಿ ಬಂದ್ ಗೆ ಬಂಬಲ ನೀಡುವಂತೆ ಸೂಚಿಸುತ್ತಿರುವುದಾಗಿ ವರದಿ ಹೇಳಿದೆ. ಕೆಲವೆಡೆ ಕಲ್ಲು ತೂರಾಟದಂತಹ ಘಟನೆ ನಡೆದಿದ್ದು, 9 ಬಸ್ ಗಳು ಜಖಂಗೊಂಡಿರುವುದಾಗಿ ವರದಿಯಾಗಿದೆ.