Advertisement

ಹೊಳೆ ತೀರ ವಾಸಿಗಳ ಗೋಳು ಕೇಳುವವರ್ಯಾರು ..?

09:31 PM Jan 27, 2021 | Team Udayavani |

ಮಲ್ಪೆ:  ಕಳೆದ ಹತ್ತಾರು ವರ್ಷಗಳಿಂದ ಕಲ್ಮಾಡಿ ಪರಿಸರದ ಊರ ನಡುವೆ ಹರಿಯುವ ಹೊಳೆಯ ಕೊಳಚೆ ನೀರಿಗೆ ಮುಕ್ತಿ ಇಲ್ಲದಂತಾಗಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಎಲ್ಲ ಬಗೆಯ ರೋಗರುಜಿನಗಳು ಇಲ್ಲಿಂದಲೇ ಹುಟ್ಟಿಕೊಳ್ಳುತ್ತಿದ್ದರೂ ಸ್ಥಳೀಯಾಡಳಿತ ಈ ಗೋಳಿಗೆ ಮುಕ್ತಿ ನೀಡುವಲ್ಲಿ ವಿಫಲವಾಗಿದೆ ಎಂಬ ಅಸಮಾಧಾನ ಈಗ ತೀವ್ರವಾಗಿ ಭುಗಿಲೆದ್ದಿದೆ.

Advertisement

ಸಂಪೂರ್ಣ ಕಪ್ಪು ಬಣ್ಣಕ್ಕೆ   :

ಉಡುಪಿ ನಗರದ ಕೊಳಚೆ ನೀರು ಇಂದ್ರಾಣಿ ನದಿಯಲ್ಲಿ ಹರಿದು ಕೊನೆಗೆ  ಕಲ್ಮಾಡಿ ಸಸಿತೋಟದ ಪರಿಸರ ಆವರಿಸಿ ಕೊಳ್ಳುತ್ತಿದೆ. ಇದರಿಂದ ಕೆಲವು ಭಾಗವಾದ ಸಸಿತೋಟ, ಕಕ್ಕೆತೋಟ, ಮಠತೋಟ, ಹೊಸಕಟ್ಟ, ಬಾಪುತೋಟ ಪ್ರದೇಶದಲ್ಲಿ ನೆಲೆಸಿರುವ 500ಕ್ಕೂ ಅಧಿಕ ಮನೆಗಳಿಗೆ ಪ್ರತಿದಿನ ನರಕ ದರ್ಶನವಾಗುತ್ತಿದೆ.

ಕಳೆದ ಹತ್ತು  ದಿನಗಳಿಂದ  ಹೊಳೆಯ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ಅಸಹ್ಯ ವಾಸನೆಯಿಂದಾಗಿ ಈ ಭಾಗದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.

ಪರಿಸರವಿಡೀ ವಾಸನೆ :

Advertisement

ಕಲ್ಮಾಡಿ ಸೇತುವೆಯಲ್ಲಿ ಹಾದು ಹೋಗುವಾಗ ಕಮಟು ವಾಸನೆ ಮೂಗಿಗೆ ಬಡಿಯುತ್ತಿದ್ದು, ಇನ್ನು ಇಲ್ಲಿ ನೆಲೆ ಸಿರುವ ಮನೆ ಮಂದಿಯ ಬದುಕು ಅಧೋಗತಿಯಾಗಿದೆ. ಪಾಚಿಗಟ್ಟಿದ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪತ್ತಿ ಯಾಗುತ್ತಿದ್ದು, ಕತ್ತಲಾಗುತ್ತಿದ್ದಂತೆ ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತಿವೆ.ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ ಯಾವ ಸರಕಾರವೂ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಉಡುಪಿ ಮಠದಬೆಟ್ಟು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಪೈಪ್‌ ಒಡೆದು ಹೋಗಿದ್ದರಿಂದ ಸಮಸ್ಯೆ ಉಂಟಾಗಿದೆ. ಈ ಭಾಗದಲ್ಲಿ ಹೊಸ ಪೈಪ್‌ ಅಳವಡಿಸುವ ಕಾಮಗಾರಿ ಗುರುವಾರ ನಡೆಯಲಿದ್ದು ಒಂದೆರಡು ದಿನದಲ್ಲಿ ಸಮಸ್ಯೆ ಬಗೆ ಹರಿಯಲಿದೆ. -ಸುಮಿತ್ರಾ ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

ದುರ್ವಾಸನೆಯುಕ್ತ ಕೊಳಚೆ ನೀರಿನಿಂದಾಗಿ ಮನೆಯ ದೈವದ ಮೂರ್ತಿಗಳು ಬಣ್ಣ ಕಳೆದುಕೊಂಡಿವೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾವ ಸಂಘಟನೆಗಳು, ಜನಪ್ರತಿನಿಧಿಗಳು ಜನರ ನೆರವಿಗೆ ಬಂದಿಲ್ಲ. ಆಗಾಗ ಊರ ಜನರೇ ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. –  ಎಂ. ಮಹೇಶ್‌ ಕುಮಾರ್‌,, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next