ಗಂಗಾವತಿ: ಈ ವರ್ಷ ತುಂಗಭದ್ರಾ ಡ್ಯಾಂ ಭರ್ತಿಯಾಗಿದ್ದರೂ ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆಗೆ ನೀರಿನ ಕೊರತೆಯಾಗುವ ಸಾದ್ಯತೆ ಇದೆ. ಸರಕಾರ ಕೂಡಲೇ ರೈತರ ನೆರವಿಗೆ ಬರುವ ಅಗತ್ಯವಿದ್ದು, ಅನ್ನದಾತನ ಆತಂಕ ದೂರ ಮಾಡಬೇಕಿದೆ.
ಹವಾಮಾನದ ವೈಪರೀತ್ಯದಿಂದಾಗಿ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ಉತ್ತಮ ಇಳುವರಿ ಬರಲಿಲ್ಲ. ಕೆಲ ರೈತರು ನಾಟಿ ಮಾಡಿದ ಗದ್ದೆಯನ್ನು ಹಾಳುಗೆಡವಿದ ಪ್ರಸಂಗವೂ ಜರುಗಿತು. ಬೇಸಿಗೆ ಹಂಗಾಮಿನಲ್ಲಿನಾಟಿ ಮಾಡಿದ ಭತ್ತದ ಬೆಳೆ ತೆನೆ ಸರಿಯಾಗಿ ಕಟ್ಟದೇ ಜೊಳ್ಳಾಗುತ್ತಿದ್ದು, ಇದರಿಂದ ಆತಂಕಗೊಂಡ ರೈತರಿಗೆ ನೀರಿನ ಕೊರತೆಯ ಇನ್ನೊಂದು ಸಮಸ್ಯೆ ಎದುರಾಗಿದೆ.
ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಸುಮಾರು 8 ಲಕ್ಷ ಎಕರೆ ಪ್ರದೇಶದಲ್ಲಿ ಈ ಬಾರಿ ಭತ್ತ ನಾಟಿ ಮಾಡಲಾಗಿದೆ. ಆದರೆ ಡ್ಯಾಂನಲ್ಲಿ ಕೇವಲ 19 ಟಿಎಂಸಿ ಅಡಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ. ಕಾರಟಗಿ, ಸಿಂಧನೂರು, ಮಾನ್ವಿ ಮತ್ತು ರಾಯಚೂರು ಭಾಗದ ರೈತರ ಬೆಳೆಗೆ ಏಪ್ರಿಲ್ ಅಂತ್ಯದವರೆಗೆ ನೀರಿನ ಅಗತ್ಯವಿದೆ. ಇರುವ ನೀರಿನಲ್ಲಿ ಭತ್ತದ ಬೆಳೆ ರೈತರ ಕೈ ಸೇರುವುದಿಲ್ಲ ಎಂಬ ಆತಂಕ ರೈತರಿಗೆ ಕಾಡುತ್ತಿದೆ. ಕೊಪ್ಪಳ, ಗಂಗಾವತಿ, ಮರಳಿ, ಶ್ರೀರಾಮನಗರ ಮತ್ತು ನದಿ ಪಾತ್ರದಲ್ಲಿ ಮೊದಲಿಗೆ ನಾಟಿ ಮಾಡಿದ ಭತ್ತದ ಬೆಳೆ ಮಾರ್ಚ್ ಅಂತ್ಯಕ್ಕೆ ಕಟಾವಿಗೆ ಬರುತ್ತಿದೆ.ಸಿದ್ದಾಪುರ, ಕಾರಟಗಿಯಿಂದ ಮಾನ್ವಿವರೆಗೆ ತಡವಾಗಿ ನೀರು ಬಂದಿದ್ದರಿಂದ ಜನವರಿ ನಂತರ ಭತ್ತ ನಾಟಿ ಮಾಡಿದ್ದಾರೆ. ಶೇ. 70ರಷ್ಟು ರೈತರ ಬೆಳೆಗೆ ಏಪ್ರಿಲ್ ಅಂತ್ಯದವರೆಗೆ ನೀರಿನ ಅಗತ್ಯವಿದೆ.
ಜೊಳ್ಳಾದ ಭತ್ತ: ಜನವರಿಗಿಂತ ಮೊದಲು ನಾಟಿ ಮಾಡಿದ ಭತ್ತ ಹವಾಮಾನ ವೈಪರೀತ್ಯದ ಪರಿಣಾಮ ಕಾಳು ಜೊಳ್ಳಾಗಿದ್ದು, ಈ ಬಾರಿಯೂ ಭತ್ತದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಕೊಪ್ಪಳ, ಗಂಗಾವತಿ, ಮರಳಿ, ಶ್ರೀರಾಮನಗರ ಹಾಗೂ ನದಿ ಪಾತ್ರದ ರೈತರು ಜನವರಿಗೂ ಮುನ್ನ ಭತ್ತ ನಾಟಿ ಮಾಡಿದ್ದು, ಭತ್ತ ಕಾಳು ಕಟ್ಟುವ ಸಂದರ್ಭದಲ್ಲಿ ಚಳಿ ಹೆಚ್ಚಾಗಿದ್ದರಿಂದ ಭತ್ತದ ಅರ್ಧ ಕಾಳು ಜೊಳ್ಳಾಗಿದ್ದು, ಉಳಿದರ್ಧ ಕಾಳು ಕಟ್ಟುತ್ತಿಲ್ಲ. ಐದಾರು ವರ್ಷಗಳಂತೆ ಈ ಬಾರಿಯೂ ರೈತರ ಸಮಸ್ಯೆ ಎದುರಿಸಬೇಕಾಗಿದೆ.
ಮುಖ್ಯಮಂತ್ರಿಗೆ ಮನವಿ: ಏಪ್ರಿಲ್ ಅಂತ್ಯದವರೆಗೂ ನೀರು ಪೂರೈಸಲು 10 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಭದ್ರಾ ಡ್ಯಾಂನಿಂದ ಈ ನೀರನ್ನು ಬಿಡಿಸುವಂತೆ ಮುಖ್ಯಮಂತ್ರಿಗೆ ಸ್ಥಳೀಯ ಶಾಸಕ, ಸಂಸದರು ಮನವಿ ಮಾಡಿದ್ದಾರೆ. ಇದುವರೆಗೂ ಸರಕಾರ ಭದ್ರಾ ಡ್ಯಾಂ ಮುಖ್ಯಅಭಿಯಂತರರಿಗೆ ನದಿಗೆ ನೀರು ಹರಿಸುವಂತೆ ಸೂಚನೆನೀಡಿಲ್ಲ ಎಂದು ತುಂಗಭದ್ರಾ ಯೋಜನೆ ಮೂಲಗಳುತಿಳಿಸಿವೆ. ಈಗಾಗಲೇ ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಭಾಗದ ರೈತರು ಶಾಂತಿಯುತ ಪ್ರತಿಭಟನೆ ನಡೆಸಿ ಜಲಸಂಪನ್ಮೂಲ ಇಲಾಖೆಯ ಕಚೇರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತುಂಗಭದ್ರಾ ಡ್ಯಾಂನಲ್ಲಿ ಸದ್ಯ 19 ಟಿಎಂಸಿ ನೀರು ಸಂಗ್ರಹವಿದ್ದು, ಈಗಾಗಲೇ ಸಿಎಂ ಹಾಗೂ ಸಂಬಂಧಪಟ್ಟ ಸಚಿವರಲ್ಲಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿ ಧಿಗಳು ಮನವಿ ಮಾಡಿ ಶೀಘ್ರವೇ ಭದ್ರಾದಿಂದ ನೀರು ಹರಿಸುವ ಸಾಧ್ಯತೆ ಇದೆ. ರೈತರು ಆತಂಕಪಡಬಾರದು.
ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು ತುಂಗಭದ್ರಾ ಕಾಡಾ ಯೋಜನೆ
ಡ್ಯಾಂನಲ್ಲಿ ಸಂಗ್ರಹವಾಗಿದ್ದ ನೀರನ್ನು ಸರಿಯಾಗಿನಿರ್ವಹಣೆ ಮಾಡದ ಕಾರಣ ಬೇಗನೆ ಡ್ಯಾಂ ಖಾಲಿಯಾಗಿದೆ. ಸದ್ಯ 19 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಏಪ್ರಿಲ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಿದರೆ ಮಾತ್ರ ಭತ್ತ ರೈತರ ಕೈ ಸೇರುತ್ತದೆ. ಆದ್ದರಿಂದ ಸರಕಾರ ಕೂಡಲೇ ಭದ್ರಾದಿಂದ 10 ಟಿಎಂಸಿ ಅಡಿ ನೀರು ಹರಿಸಬೇಕು.
– ವಿ. ಪ್ರಸಾದ, ರೈತ
ಕೆ. ನಿಂಗಜ್ಜ