ಗಂಗಾವತಿ: ತುಂಗಭದ್ರಾ ಡ್ಯಾಂ ನಲ್ಲಿ ನೀರಿನ ಸರಿಯಾದ ನಿರ್ವಹಣೆ ಇಲ್ಲದೇ ನೀರಿನ ಕೊರತೆ ಉಂಟಾಗಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ಭತ್ತ ಹಾಗೂ ಇತರೆ ಬೆಳೆ ರೈತರ ಕೈ ಸೇರುವುದು ಅನುಮಾನವಾಗಿದ್ದು ಅಚ್ಚುಕಟ್ಟು ಪ್ರದೇಶದ ರೈತರು ಆತಂಕದಲ್ಲಿದ್ದಾರೆ.
ಸದ್ಯ ಡ್ಯಾಂನಲ್ಲಿ 33.286 ಟಿಎಂಸಿ ನೀರಿನ ಸಂಗ್ರಹವಿದ್ದು ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಏ.10 ವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತದೆ. ನೀರಿನ ಕೊರತೆಯ ಹಿನ್ನೆಲೆಯಲ್ಲಿ ಮಾ.20 ವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವ ಸಾಧ್ಯತೆ ಇದೆ. ಇದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಭತ್ತ ಹಾಗೂ ಇತರೆ ಬೆಳೆಗಳಿಗೆ ನೀರಿನ ಕೊರತೆಯಾಗಲಿದೆ.
ತುಂಗಭದ್ರಾ ಕಾಡಾ ಮತ್ತು ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ನೀರಿನ ಸರಿಯಾದ ನಿರ್ವಾಹಣೆ ಮಾಡದೇ ಕಾಲುವೆ ಮತ್ತು ನದಿಯ ಮೂಲಕ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಕ್ಕೆ ಡಿಸೆಂಬರ್ ತಿಂಗಳಲ್ಲಿ ಸುಮಾರು 17 ಟಿಎಂಸಿ ನೀರು ಹರಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷ ಉತ್ತಮ ಸತತ ಮಳೆಯಾಗಿ ಡ್ಯಾಂ ಭರ್ತಿಯಾಗಿ ಹೆಚ್ಚುವರಿ 500 ಟಿಎಂಸಿಗಿಂತಲೂ ಹೆಚ್ಚು ನೀರು ನದಿಗೆ ಹೋಗಿದ್ದು ಹಾಲಿ ಕಾಡಾ ಅಧ್ಯಕ್ಷರು ಸ್ವತಹ ಅಚ್ಚುಕಟ್ಟು ಪ್ರದೇಶದ ನಿವಾಸಿಯಾಗಿದ್ದರೂ ನೀರಿನ ನಿರ್ವಾಹಣೆ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಮನವಿ ಸಲ್ಲಿಕೆ: ಬೇಸಿಗೆ ಹಂಗಾಮಿನಲ್ಲಿ ಬೆಳೆದು ನಿಂತ ಭತ್ತದ ಹಾಗೂ ಇತರೆ ಬೆಳೆಗಳಿಗೆ ತುಂಗಭದ್ರಾ ಡ್ಯಾಂನಲ್ಲಿ 6 ಟಿಎಂಸಿ ನೀರಿನ ಕೊರತೆಯುಂಟಾಗುವ ಸಾಧ್ಯತೆ ಇದೆ. ಸದ್ಯ ಡ್ಯಾಂ ನಲ್ಲಿರುವ ನೀರಿನ ಪ್ರಮಾಣ ಮಾ.20 ವರೆಗೆ ಮಾತ್ರ ಸಿಗುವ ಸಾಧ್ಯತೆ ಇದ್ದು ಬೆಳೆದು ನಿಂತ ಬೆಳೆ ರೈತರ ಕೈ ಸೇರಲು ಭದ್ರ ಡ್ಯಾಂ ನಲ್ಲಿರುವ ಹೆಚ್ಚು 10 ಟಿಎಂಸಿ ನೀರನ್ನು ತುಂಗಭದ್ರಾ ಡ್ಯಾಂ ಗೆ ಹರಿಸಲು ಕ್ರಮ ಕೈಗೊಳ್ಳುವಂತೆ ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವಾಲಯದ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್ ಸೇರಿ ಸಂಸದರು,ಸಚಿವರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.