Advertisement

ಬತ್ತುತ್ತಿದೆ ಬ್ಯಾರೇಜ್‌-ಬೆಳೆಗೆ ನೀರಿನ ಕೊರತೆ

12:33 PM Feb 01, 2022 | Team Udayavani |

ಚಿಂಚೋಳಿ: ತಾಲೂಕಿನ ಮುಲ್ಲಾಮಾರಿ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್‌ಗಳಿಗೆ ಇನ್ನುವರೆಗೆ ಗೇಟ್‌ ಅಳವಡಿಸದೇ ಇರುವುದರಿಂದ ನೀರು ವ್ಯರ್ಥವಾಗಿ ಹರಿದು ರೈತರ ಬೆಳೆಗಳಿಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಮುಲ್ಲಾಮಾರಿ ನದಿಯ ಅಕ್ಕಪಕ್ಕ ರೈತರು ದೂರಿದ್ದಾರೆ.

Advertisement

ತಾಲೂಕಿನ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಕೊಟಗಾ, ಕನಕಪೂರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ, ಪೋಲಕಪಳ್ಳಿ, ಗರಗಪಳ್ಳಿ, ಜಟ್ಟೂರ ಗ್ರಾಮಗಳ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ.

ಎಲ್ಲ ಬ್ಯಾರೇಜ್‌ಗಳಿಗೆ ಜಲ ಸಂಪನ್ಮೂಲ ಇಲಾಖೆಯಿಂದ ನವೆಂಬರ್‌ ತಿಂಗಳಲ್ಲಿಯೇ ಗೇಟ್‌ ಅಳವಡಿಸಿ ನೀರಿನ ಸಂಗ್ರಹಣೆ ಮಾಡುವ ಕಾರ್ಯ ನಡೆಯಬೇಕಾಗಿತ್ತು. ಆದರೆ ಇಲಾಖೆ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಎಲ್ಲ ಬ್ಯಾರೇಜ್‌ಗಳಿಗೆ ಗೇಟ್‌ಗಳು ಅಳವಡಿಸದೇ ಇರುವುದರಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಮುಲ್ಲಾಮಾರಿ ನದಿಗೆ ನಿರ್ಮಿಸಿದ ಬ್ಯಾರೇಜ್‌ಗಳಲ್ಲಿನ ನೀರಿನ ಸಂಗ್ರಹಣೆ ಆಧಾರ ಮೇಲೆ ನದಿ ದಡದ ರೈತರು ತಮ್ಮ ಹೊಲಗಳಲ್ಲಿ ಹೆಚ್ಚಾಗಿ ತರಕಾರಿ, ಕಲ್ಲಂಗಡಿ, ದ್ರಾಕ್ಷಿ, ಕಬ್ಬು, ಬಾಳೆ, ನೀರಾವರಿ ಬೆಳೆಗಳು ಬೆಳೆಯುತ್ತಾರೆ. ಆದರೆ ನದಿಯಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಆಗುತ್ತಿಲ್ಲ ಎಂಬುದು ರೈತರ ಕೊರಗು.

ಮುಲ್ಲಾಮಾರಿ ನದಿಯಲ್ಲಿ ರಾಜಾರೋಷವಾಗಿ ಟ್ರ್ಯಾಕ್ಟರ್‌, ಲಾರಿ, ಟಂಟಂ, ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ಮರಳುಗಳ್ಳರ ಹಾವಳಿ ಹೆಚ್ಚಾಗಿದೆ. ಕೊಟಗಾ, ಅಡಕಿಮೊಕ ತಾಂಡಾ, ಚಿಮ್ಮನಚೋಡ, ಕನಕಪೂರ, ತಾಜಲಾಪೂರ, ಮರಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ದೇಗಲಮಡಿ, ಚಿಂಚೋಳಿ, ಪೋಲಕಪಳ್ಳಿ, ಭಗರಗಪಳ್ಳಿ-ಭಕ್ತಂಪಳ್ಳಿ, ಹಲಕೊಡಾ, ಪೋತಂಗಲ, ಜಟ್ಟೂರ ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಾಟ ಹೆಚ್ಚಾಗಿರುವುದರಿಂದ ನದಿ ನೀರು ಬತ್ತಿ ಹೋಗುತ್ತಿದೆ.

Advertisement

ಬೇಸಿಗೆ ದಿನಗಳಲ್ಲಿ ದನಕರುಗಳಿಗೆ ಕುಡಿಯುವ ನೀರು ಸಂಗ್ರಹಣೆ ಅತಿ ಅವಶ್ಯವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗರಗಪಳ್ಳಿ ಬ್ಯಾರೇಜ್‌ಗೆ ಗೇಟ್‌ ಅಳವಡಿಸಬೇಕು ಎಂದು ಮುಲ್ಲಾಮಾದಿ ನದಿ ದಂಡೆಯ ರೈತರು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next