Advertisement

ಸಿಬ್ಬಂದಿ ಕೊರತೆ; ಸೊರಗುತ್ತಿವೆ ಗ್ರಂಥಾಲಯಗಳು

03:53 PM Jan 16, 2018 | Team Udayavani |

ರಾಯಚೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಗ್ರಂಥಾಲಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು
ನೀಡುತ್ತಿದ್ದರೆ, ಜಿಲ್ಲೆಯಲ್ಲಿ ಮಾತ್ರ ಗ್ರಂಥಾಲಯಗಳಿಗೆ ಸಿಬ್ಬಂದಿ ಕೊರತೆ ಬಾಧಿಸುತ್ತಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 60 ಕಾಯಂ ಹುದ್ದೆಗಳಿದ್ದು, ಅದರಲ್ಲಿ 40 ಹುದ್ದೆಗಳು ಖಾಲಿ ಇವೆ. ಇರುವ 20 ಸಿಬ್ಬಂದಿಯಲ್ಲೂ ಮೂವರು ಸಿಬ್ಬಂದಿ ಬೇರೆಡೆಗೆ ತಾತ್ಕಾಲಿಕ ವರ್ಗಾವಣೆ ಪಡೆದಿದ್ದಾರೆ. ಇದರಿಂದ ಇರುವ ಸಿಬ್ಬಂದಿಯಿಂದಲೇ ಗ್ರಂಥಾಲಯಗಳ ನಿರ್ವಹಣೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯಲ್ಲಿ 164 ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಾಲಯಗಳಿವೆ. 2016-17, 17-18ನೇ ಸಾಲಿನಲ್ಲಿ 16 ಗ್ರಂಥಾಲಯಗಳು ಮಂಜೂರಾಗಿವೆ. ನಗರ ಕೇಂದ್ರ ಗ್ರಂಥಾಲಯ ಸೇರಿ ಜಿಲ್ಲೆಯಲ್ಲಿ ಐದು ಶಾಖಾ ಗ್ರಂಥಾಲಯಗಳಿವೆ. ಸದ್ಯಕ್ಕೆ 87 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿದ್ದು, ಉಳಿದವುಗಳನ್ನು ಬಾಡಿಗೆ ಕಟ್ಟಡ, ಸಮುದಾಯ ಭವನಗಳಲ್ಲಿ ನಡೆಸಲಾಗುತ್ತಿದೆ. ಲಿಂಗಸುಗೂರಿನಲ್ಲಿ ಶಾಸಕರ ಅನುದಾನದಲ್ಲಿ ಎರಡು, ಪೋತ್ನಾಳದಲ್ಲಿ ಒಂದು ಕಟ್ಟಡ ಮಂಜೂರಾಗಿದೆ. 19 ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿವೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಂಥಪಾಲಕರನ್ನು ನೇಮಿಸಿದ್ದು, ಅವರಿಂದಲೇ ಗ್ರಂಥಾಲಯಗಳನ್ನು ನಿಭಾಯಿಸಲಾಗುತ್ತಿದೆ. ಆದರೆ, ನಗರ ಮತ್ತು ಶಾಖಾ ಗ್ರಂಥಾಲಯಗಳಲ್ಲೇ ಕಾಯಂ ಸಿಬ್ಬಂದಿ ಸಿಗದೆ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸುವಂಥ ಅನಿವಾರ್ಯತೆ ಎದುರಾಗಿದೆ.

ಸಂಗ್ರಹವಾಗದ ಕರ: ಇನ್ನು ಗ್ರಾಮ ಪಂಚಾಯತಿಗಳಿಂದ ಶೇ.6ರಷ್ಟು ಗ್ರಂಥಾಲಯ ಕರ ಸಂಗ್ರಹಿಸಬೇಕು. ಸಂಗ್ರಹವಾದ ಒಟ್ಟು ಕರದಲ್ಲಿ ಶೇ.10ರಷ್ಟು ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಬಳಸಿ, ಉಳಿದ ಹಣವನ್ನು ಗ್ರಂಥಾಲಯಕ್ಕೆ ಪಾವತಿಸಬೇಕು. ಜಿಲ್ಲೆಯಲ್ಲಿ 180ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಿದ್ದು, 164ಗ್ರಾಪಂಗಳಲ್ಲಿ ಗ್ರಂಥಾಲಯಗಳಿವೆ. ಗ್ರಾಮ ಪಂಚಾಯತಿಗಳಲ್ಲಿ ಗ್ರಂಥಪಾಲಕರಿಗೆ ಸರ್ಕಾರವೇ ವೇತನ ಪಾವತಿಸುತ್ತಿದೆ. ಆದರೆ, ಪ್ರತಿಕೆಗಳು, ಪುಸ್ತಕಗಳನ್ನು ಪೂರೈಸಲು ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾದ ಕರದ ಹಣವನ್ನೇ ಬಳಸಬೇಕು. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಒಟ್ಟಾರೆ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಕರ ಸಂಗ್ರಹಿಸಬೇಕು. ಆದರೆ, ಕಳೆದ ವರ್ಷ ಕೇವಲ 30 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ. ಇದರಿಂದ ಗ್ರಂಥಾಲಯಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ.

Advertisement

ಓದುಗರ ಸಂಖ್ಯೆ ಹೆಚ್ಚಳ: ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 371 ಜೆ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಿದ ನಂತರ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಇದರಿಂದ ಯುವಕರು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಷ್ಟು ಸಿದ್ಧತೆ ಮಾಡುತ್ತಿದ್ದಾರೆ. ಪರಿಣಾಮ ಗ್ರಂಥಾಲಯಗಳಿಗೆ ಬರುವ ಓದುಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಒಟ್ಟಾರೆ ಈ ಭಾಗದ ಗ್ರಂಥಾಲಯಗಳ ಪ್ರಗತಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಒತ್ತು ನೀಡುತ್ತಿದೆ. ಆದರೆ, ಸರ್ಕಾರ ಅಗತ್ಯಕ್ಕೆ ತಕ್ಕ ಸಿಬ್ಬಂದಿಯನ್ನು ನಿಯೋಜಿಸದೆ ಗ್ರಂಥಾಲಯಗಳನ್ನು ಸೊರಗುವಂತೆ ಮಾಡಿರುವುದು ವಿಪರ್ಯಾಸ. ಸಾಕಷ್ಟು ಉದ್ಯೋಗಾಕಾಂಕ್ಷಿಗಳು ಕೆಲಸಕ್ಕಾಗಿ ಹಾತೊರೆಯುತ್ತಿದ್ದು, ಸರ್ಕಾರ ಶೀಘ್ರದಲ್ಲೇ ಖಾಲಿ ಹುದ್ದೆಗಳ ಭರ್ತಿ ಮಾಡಲಿ ಎಂಬ ಒತ್ತಾಯ ಕೇಳಿ ಬರುತ್ತಿದೆ

ರಾಯಚೂರು ನಗರದ ಕೇಂದ್ರ ಗ್ರಂಥಾಲಯ ಸೇರಿ ಐದು ಶಾಖಾ ಗ್ರಂಥಾಲಯಗಳಿವೆ. ಆದರೆ, ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಇದರಿಂದ ಗ್ರಂಥಾಲಯಗಳ ನಿರ್ವಹಣೆ ಸಮಸ್ಯೆ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ಗ್ರಂಥಾಲಯ ಕರ ಸರಿಯಾಗಿ ಪಾವತಿಯಾಗುತ್ತಿಲ್ಲ. ಹೀಗಾಗಿ ಗುತ್ತಿಗೆ ನೌಕರರನ್ನು ನಿಯೋಜಿಸಿಕೊಳ್ಳಲು ಅನುದಾನ ಸಮಸ್ಯೆ
ಎದುರಾಗಿದೆ. 
 ಎಂ.ಎಸ್‌.ರೆಬಿನಾಳ, ಜಿಲ್ಲಾ ಗ್ರಂಥಾಲಯಾಧಿಕಾರಿ

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next